Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಮಕ್ಕಳು ಮತ್ತು ವಯಸ್ಕರ ಮೇಲೆ ನಾಯಿಗಳ ದಾಳಿ ಪ್ರಕರಣಗಳು ವರದಿಯಾಗುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .
ನಗರದ ವಿವಿಧ ಪ್ರದೇಶಗಳಲ್ಲಿ ರಾತ್ರಿ ಮಾತ್ರವಲ್ಲ, ಹಗಲಲ್ಲಿಯೂ ನಾಯಿಗಳ ಗುಂಪುಗಳು ಸಂಚರಿಸುತ್ತಿರುವುದರಿಂದ ಮಕ್ಕಳನ್ನು ರಸ್ತೆಗಿಳಿಸುವುದೇ ಕಷ್ಟವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿಗೂ ಭಯದ ವಾತಾವರಣ ನಿರ್ಮಾಣವಾಗಿದೆ .
ಈ ಹಿನ್ನೆಲೆಯಲ್ಲಿ Greater Bengaluru Authority (ಜಿಬಿಎ) ಅಧಿಕಾರಿಗಳ ವಿರುದ್ಧ ಜನರು ಕೆಂಡಾಮಂಡಲ ಗೊಂಡಿದ್ದಾರೆ. ನಾಯಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ . “ಶ್ವಾನಗಳಿಗೆ ಬಿರಿಯಾನಿ ಹಾಕೋ ಪ್ಲಾನ್ ಮಾಡ್ತಾರೆ, ಆದರೆ ನಾಯಿಗಳ ಕಂಟ್ರೋಲ್ ಮಾಡಲು ಕ್ರಮವೇ ಇಲ್ಲವೇ ?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ .
ನಾಯಿಗಳ ಕಾಟದಿಂದ ಬೇಸತ್ತಿರುವ ಸಾರ್ವಜನಿಕರು ತಕ್ಷಣವೇ ಬೀದಿನಾಯಿಗಳ ನಿಯಂತ್ರಣಕ್ಕೆ ವಿಶೇಷ ಅಭಿಯಾನ ನಡೆಸುವಂತೆ ಆಗ್ರಹಿಸಿದ್ದಾರೆ. ಸ್ಟೆರಿಲೈಸೇಶನ್, ರೇಬೀಸ್ ಲಸಿಕೆ ಹಾಗೂ ಪುನರ್ವಸತಿ ಕ್ರಮಗಳನ್ನು ವೇಗವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ .
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯುವುದಾಗಿ ಕೆಲವರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕುವಂತೆ ಸಾರ್ವಜನಿಕರ ಒತ್ತಾಯ ಜೋರಾಗಿದೆ .
