Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ಮೆಡಿಕಲ್ ಮಾಫಿಯಾ ವಿರುದ್ಧ ಧ್ವನಿ ಎತ್ತಿದ್ದ ವೈದ್ಯರಿಗೆ ಈಗ ಬೆದರಿಕೆ ಎದುರಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ನಗರದ ಭದ್ರಪ್ಪ ಲೇಔಟ್ನಲ್ಲಿ ಇರುವ ಡಾ. ಸುನೀಲ್ ಹೆಬ್ಬಿ ಅವರ ಕ್ಲಿನಿಕ್ಗೆ ಇಬ್ಬರು ಅಪರಿಚಿತರು ನುಗ್ಗಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ ಸುಮಾರು 9.30ರ ಸುಮಾರಿಗೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಇಬ್ಬರು ಮಾಸ್ಕ್ಧಾರಿಗಳು ಕ್ಲಿನಿಕ್ಗೆ ಬಂದಿದ್ದಾರೆ. ಅವರ ಚಲನವಲನ ಅನುಮಾನಾಸ್ಪದವಾಗಿದ್ದುದರಿಂದ ವೈದ್ಯರಿಗೆ ಶಂಕೆ ಮೂಡಿದೆ. ತಕ್ಷಣವೇ “ಮಾಸ್ಕ್ ತೆಗೆಯಿರಿ” ಎಂದು ಹೇಳುತ್ತಾ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಆರಂಭಿಸಿದ್ದಂತೆ, ಇಬ್ಬರೂ ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.
ಮಾಸ್ಕ್ಧಾರಿಗಳು ಓಡುತ್ತಿರುವ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಗೊಂಡಿವೆ. ಅಪರಿಚಿತರು ಶಸ್ತ್ರಾಸ್ತ್ರ ಹೊಂದಿದ್ದಿರಬಹುದು ಎಂಬ ಅನುಮಾನವನ್ನು ಡಾ. ಸುನೀಲ್ ಹೆಬ್ಬಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮೆಡಿಕಲ್ ಮಾಫಿಯಾ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿದ್ದ ಹಿನ್ನೆಲೆ ಈ ಘಟನೆಗೆ ಮತ್ತಷ್ಟು ಗಂಭೀರತೆ ಬಂದಿದೆ .
ಘಟನೆ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಡಾ. ಸುನೀಲ್ ಹೆಬ್ಬಿ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರವಾಗಿ ತನಿಖೆ ಆರಂಭಿಸಿದ್ದಾರೆ.
ನಗರದಲ್ಲಿ ವೈದ್ಯರ ಭದ್ರತೆ ಪ್ರಶ್ನಾರ್ಥಕವಾಗುತ್ತಿರುವ ಈ ಘಟನೆ ವೈದ್ಯ ಸಮುದಾಯದಲ್ಲಿ ಆತಂಕ ಹುಟ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
