Ashwaveega News 24×7 ಮಾರ್ಚ್ 01 – 2026 : ಬೆಂಗಳೂರು ನಗರದ ಹೃದಯಭಾಗ Majestic ನಲ್ಲಿ ಬೆಳಗಿನ ಜಾವ ಭಾರೀ ಹೈಡ್ರಾಮಾ ನಡೆದಿದೆ . ಬೆಳಿಗ್ಗೆ 5.15 ರ ಸುಮಾರಿಗೆ ಕತ್ರಿಗುಪ್ಪೆಗೆ ತೆರಳಲು ಆಟೋ ಕೇಳಿದ ಮಹಿಳೆ ಸೋನು ಅವರಿಗೆ, ಆಟೋ ಚಾಲಕ 700 ರೂಪಾಯಿ ಬೇಡಿಕೆ ಇಟ್ಟಿದ್ದಾನೆ . ಸಾಮಾನ್ಯವಾಗಿ ಮೀಟರ್ ದರಕ್ಕಿಂತ ಬಹಳ ಹೆಚ್ಚು ಹಣ ಕೇಳಿದ್ದರಿಂದ ಮಹಿಳೆ ಕಾರಣ ಕೇಳಿದ್ದಾರೆ.
ಆದರೆ, “ಹತ್ತೋ ಹಾಗಿದ್ರೆ ಹತ್ತು… ಇಲ್ಲ ಅಂದ್ರೆ ಹೋಗು !” ಎಂಬ ನಿರ್ಲಕ್ಷ್ಯದ ಉತ್ತರ ನೀಡಿದ ಚಾಲಕನ ಮಾತುಗಳಿಂದ ವಾಗ್ವಾದ ಜೋರಾಗಿದೆ. ಹಣದ ವಿಚಾರದಲ್ಲಿ ಇಬ್ಬರ ಮಧ್ಯೆ ಜಟಾಪಟಿ ನಡೆದಿದ್ದು, ಪರಸ್ಪರ ನಿಂದನೆಗೂ ಕಾರಣವಾಗಿದೆ .
ಸ್ಥಿತಿ ಗಂಭೀರವಾಗುತ್ತಿದ್ದಂತೆ ಮಹಿಳೆ ತಮ್ಮ ಮೊಬೈಲ್ ತೆಗೆದು ವಿಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಲಾಗಿದ್ದು, ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೆಲವರು ಹೆಚ್ಚುವರಿ ಹಣ ಪೀಕುವ ದಂಧೆ ನಡೆಸುತ್ತಿರುವುದರಿಂದ ನಿಯಮ ಪಾಲಿಸಿ ಪ್ರಾಮಾಣಿಕವಾಗಿ ಆಟೋ ಓಡಿಸುವ ಚಾಲಕರಿಗೂ ಕೆಟ್ಟ ಹೆಸರು ಬರುತ್ತಿದೆ” ಎಂದು ಹಲವರು ಕಿಡಿ ಕಾರಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಇಂತಹ ದಂಧೆಗಳಿಗೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಬೆಂಗಳೂರಿನ ಜನಸಾಮಾನ್ಯರ ಪ್ರಯಾಣ ಭದ್ರತೆ ಮತ್ತು ನ್ಯಾಯಸಮ್ಮತ ದರದ ಪ್ರಶ್ನೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
