Ashwaveega News 24×7 ಮಾರ್ಚ್ 02– 2026 :ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿರುವ ಸಂದರ್ಭದಲ್ಲಿ ಇರಾನ್ ದೇಶದ ಜಮ್ಕರನ್ ಮಸೀದಿ ಮೇಲೆ ಕೆಂಪು ಧ್ವಜ ಹಾರಿಸಲಾಗಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಜಮ್ಕರನ್ ಮಸೀದಿ ಪವಿತ್ರ ಹಾಗೂ ರಾಜಕೀಯವಾಗಿ ಪ್ರಭಾವ ಹೊಂದಿರುವ ಧಾರ್ಮಿಕ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇತಿಹಾಸದಲ್ಲಿ ಕೆಂಪು ಧ್ವಜ ಹಾರಿಸುವುದು ಹುತಾತ್ಮತೆಗೆ ಪ್ರತೀಕಾರದ ಸಂಕೇತವೆಂದು ಅರ್ಥೈಸಲಾಗಿದೆ.
ಅಯಾತೊಲ್ಲಾ ಅಲಿ ಖಮೇನಿ ಅವರ ಮೇಲೆ ನಡೆದ ದಾಳಿ ಅಥವಾ ಸಾವಿನ ಸುದ್ದಿಗಳ ಬೆನ್ನಲ್ಲೇ ಈ ಧ್ವಜ ಹಾರಿಸಲಾಗಿದೆ ಅಂತೆ . ಆದರೆ ಈ ಕುರಿತಾಗಿ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಇರಾನ್ ಪರ ವಲಯಗಳು ಇದನ್ನು “ಅನ್ಯಾಯದ ವಿರುದ್ಧದ ಹೋರಾಟದ ಸಂಕೇತ ” ಎಂದು ಹೇಳಿಕೊಂಡಿದ್ದರೆ , ಪಾಶ್ಚಾತ್ಯ ವಿಶ್ಲೇಷಕರು ಇದನ್ನು ರಾಜಕೀಯ ಸಂದೇಶವೆಂದು ವ್ಯಾಖ್ಯಾನಿಸುತ್ತಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳು ನಡೆದಿರುವ ವರದಿಗಳು ಕೇಳಿಬಂದಿವೆ. ಕೆಲವು ಕಟ್ಟಡಗಳು ಹಾನಿಗೊಳಗಾಗಿದ್ದು, ಸಾವು-ನೋವು ಸಂಭವಿಸಿರುವ ಮಾಹಿತಿ ದೊರಕಿದೆ. ಆದರೆ ನಿಖರ ಸಂಖ್ಯೆಗಳ ಬಗ್ಗೆ ಸ್ಪಷ್ಟತೆ ಇಲ್ಲ.
ಕೆಂಪು ಧ್ವಜ ಹಾರಾಟದ ಮೂಲಕ ಇರಾನ್ ತನ್ನ ವಿರೋಧಿಗಳಿಗೆ ತೀವ್ರ ಎಚ್ಚರಿಕೆ ನೀಡಿದೆಯೇ ? ಅಥವಾ ಇದು ಆಂತರಿಕ ರಾಜಕೀಯ ಸಂದೇಶವೇ ? ಎಂಬ ಪ್ರಶ್ನೆಗಳು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉಗ್ರತೆಯಿಂದ ಉರಿಯುತ್ತಿರುವ ಪರಿಸ್ಥಿತಿಗೆ ಈ ಬೆಳವಣಿಗೆ ಮತ್ತಷ್ಟು ಉದ್ವಿಗ್ನತೆಯನ್ನು ಸೇರಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ತಿರುಗುತ್ತದೆ ಎಂಬುದರ ಮೇಲೆ ವಿಶ್ವದ ಗಮನ ನೆಟ್ಟಿದೆ.
