Ashwaveega News 24×7 ಮಾರ್ಚ್ 03 – 2026 : ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಾಣಿಸಿಕೊಂಡಿದ್ದು, ಅದರ ಪ್ರಭಾವ ಚಿನ್ನ ಮತ್ತು ಬೆಳ್ಳಿ ದರಗಳ ಮೇಲೂ ಸ್ಪಷ್ಟವಾಗಿ ಗೋಚರಿಸಿದೆ. ಕೆಲ ದಿನಗಳ ಹಿಂದೆ ದಿಢೀರ್ ಏರಿಕೆ ಕಂಡಿದ್ದ ಗೋಲ್ಡ್ ಮತ್ತು ಸಿಲ್ವರ್ ದರ ಇದೀಗ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ .
10 ಗ್ರಾಂ ಚಿನ್ನದ ಬೆಲೆ 1 ಲಕ್ಷದ 70 ಸಾವಿರ ರೂಪಾಯಿಗೆ ತಲುಪಿದ್ದರೂ, ನಿನ್ನೆಗೆ ಹೋಲಿಸಿದರೆ 5 ಸಾವಿರ ರೂಪಾಯಿ ಇಳಿಕೆ ಕಂಡಿದೆ. ಯುದ್ಧದ ಆತಂಕದಿಂದ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಚಿನ್ನದ ಮೇಲೆ ಬೇಡಿಕೆ ಹೆಚ್ಚಾಗಿ ದರ ಏರಿಕೆಯಾಗಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಹೂಡಿಕೆದಾರರು ಮಾರಾಟಕ್ಕೆ ಮುಂದಾದ ಪರಿಣಾಮ ದರದಲ್ಲಿ ತಾತ್ಕಾಲಿಕ ಇಳಿಕೆ ಕಂಡುಬಂದಿದೆ.
ಬಂಗಾರ ಮಾತ್ರವಲ್ಲ, ಬೆಳ್ಳಿ ದರವೂ ಇಳಿಕೆಯ ಹಾದಿ ಹಿಡಿದಿದೆ. ಒಂದು ಕೆಜಿ ಬೆಳ್ಳಿ ಬೆಲೆ 3 ಲಕ್ಷದ ಗಡಿಯನ್ನು ದಾಟಿ ದಾಖಲೆ ಮಟ್ಟ ತಲುಪಿದ್ದರೂ , ಇದೀಗ 17 ಸಾವಿರ ರೂಪಾಯಿ ಇಳಿಕೆಯಾಗಿ 2 ಲಕ್ಷದ 83 ಸಾವಿರ ರೂಪಾಯಿಗೆ ತಲುಪಿದೆ. ಕೈಗಾರಿಕಾ ಬಳಕೆಯಲ್ಲಿಯೂ ಪ್ರಮುಖ ಪಾತ್ರವಹಿಸುವ ಬೆಳ್ಳಿಗೆ ಜಾಗತಿಕ ಆರ್ಥಿಕ ಅನಿಶ್ಚಿತತೆ ಪರಿಣಾಮ ಬೀರುತ್ತಿದೆ .
ಯುದ್ಧದ ಪರಿಸ್ಥಿತಿ , ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬಲವರ್ಧನೆ, ಕಚ್ಚಾ ತೈಲದ ಬೆಲೆ ಏರಿಳಿತ ಇವುಗಳ ಸಮನ್ವಯದಿಂದ ಚಿನ್ನ-ಬೆಳ್ಳಿ ದರಗಳಲ್ಲಿ ತೀವ್ರ ಏರುಪೇರು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಯುದ್ಧ ಪರಿಸ್ಥಿತಿ ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಮೌಲ್ಯ ಬದಲಾವಣೆ ಅವಲಂಬಿತವಾಗಿರಲಿದೆ .
ಒಟ್ಟಾರೆ, ಹೂಡಿಕೆದಾರರು ಮತ್ತು ಆಭರಣ ಪ್ರಿಯರು ಮಾರುಕಟ್ಟೆ ಬೆಳವಣಿಗೆಗಳನ್ನು ಸಮೀಕ್ಷಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದು ಒಳಿತು ಎಂದು ಸಲಹೆ ನೀಡಲಾಗಿದೆ.
