Ashwaveega News 24×7 ಮಾರ್ಚ್ 03 – 2026 : ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದರ್ಶನ್ ವಿರುದ್ಧ ಸಂಚು ರೂಪಿಸಲಾಗಿದೆ ಎಂಬ ಆರೋಪದೊಂದಿಗೆ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ. “ದರ್ಶನ್ ತಪ್ಪು ಮಾಡಿದ್ದರೆ ಕಾನೂನಿನಡಿ ಶಿಕ್ಷೆಯಾಗಲಿ. ಆದರೆ ನಿರಪರಾಧಿಯಾಗಿದ್ದರೆ ಅನ್ಯಾಯವಾಗಬಾರದು” ಎಂದು ಸಂಘಟನೆಗಳು ಆಗ್ರಹಿಸಿವೆ.
ಪ್ರಕರಣದ ತನಿಖೆಯಲ್ಲಿ ಪೊಲೀಸರು ಪ್ರಾಮಾಣಿಕತೆ ಕಾಪಾಡಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರೇ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪವೂ ಹೊರಬಿದ್ದಿದೆ. ವಿಶೇಷವಾಗಿ ಎಸಿಪಿ ಚಂದನ್ ಮತ್ತು ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ವಿರುದ್ಧ ಸಂಘಟನೆಗಳು ಕೆಂಡಾಮಂಡಲಗೊಂಡಿದ್ದು, ಇಬ್ಬರೂ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಸೀಜ್ ಮಾಡಲಾದ ಫೋಟೋಗಳಲ್ಲಿ ಠಾಣೆಯ ಫ್ಲೋರಿಂಗ್ ಮಿಸ್ಮ್ಯಾಚ್ ಕಾಣಿಸಿಕೊಂಡಿದೆ ಎಂಬ ಆರೋಪ ಹೊಸ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವನ್ನು ಆಧರಿಸಿ ಆರೋಪಿಯ ಪವನ್ ಪರ ವಕೀಲ ಸುಧಾನ್ವ ಮಾಹಿತಿ ಹಂಚಿಕೊಂಡಿದ್ದು, ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ಬಂದಿದೆ.
ಈ ಹಿನ್ನೆಲೆ ದೊಡ್ಡ ಮಟ್ಟದ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ. ಮಾರ್ಚ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಭಾರಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ . ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಕನ್ನಡ ಪರ ಹೋರಾಟಗಾರ ನಟರಾಜ್ ಬೊಮ್ಮಸಂದ್ರ ತಿಳಿಸಿದ್ದಾರೆ.
ಒಟ್ಟಾರೆ, ದರ್ಶನ್ ಪ್ರಕರಣ ರಾಜಕೀಯ ಮತ್ತು ಸಾಮಾಜಿಕ ಆಯಾಮ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಬೆಳವಣಿಗೆಗಳು ಹೇಗೆ ತಿರುಗಿಕೊಳ್ಳುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.
