Ashwaveega News 24×7 ಮಾರ್ಚ್ 03– 2026 : ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ಸಂಘರ್ಷದ ಪರಿಣಾಮವಾಗಿ ಜಗತ್ತಿನ ಇಂಧನ ಮಾರುಕಟ್ಟೆ ತಲ್ಲಣಗೊಂಡಿದೆ. ತೈಲ ಸಾಗಣೆಗೆ ಅತ್ಯಂತ ಪ್ರಮುಖವಾದ ಹರ್ಮುಜ್ ಜಲಸಂಧಿ ಬಳಿ ಉದ್ಭವಿಸಿರುವ ತೀವ್ರ ಪರಿಸ್ಥಿತಿ ಜಾಗತಿಕ ತೈಲ ಸರಬರಾಜಿಗೆ ಭಾರೀ ಹೊಡೆತ ನೀಡಿದೆ.
ಸಂಘರ್ಷದ ಬೆನ್ನಲ್ಲೇ ಜಲಸಂಧಿ ಮೂಲಕ ಸಾಗುವ ನೌಕಾಯಾನಕ್ಕೆ ತೀವ್ರ ಅಡ್ಡಿ ಉಂಟಾಗಿದೆ. ವರದಿಗಳ ಪ್ರಕಾರ, ಜಲಸಂಧಿ ಸಮೀಪ 700ಕ್ಕೂ ಹೆಚ್ಚು ತೈಲ ನೌಕೆಗಳು ನಿರೀಕ್ಷೆಯಲ್ಲಿ ನಿಂತಿವೆ. ಕಳೆದ ಮೂರು ದಿನಗಳಲ್ಲಿ ಕೇವಲ ಮೂರು ನೌಕೆಗಳು ಮಾತ್ರ ಜಲಸಂಧಿ ದಾಟಿದವು ಎಂಬ ಮಾಹಿತಿ ಹೊರಬಿದ್ದಿದೆ. ಜಲಸಂಧಿ ಸುತ್ತಮುತ್ತಿನ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಇರಾನ್ ಕೈಗೊಂಡ ಕ್ರಮ ಜಾಗತಿಕ ತೈಲ ಮಾರುಕಟ್ಟೆಯನ್ನು ನಡುಗಿಸಿದೆ. ಈ ಮಾರ್ಗದಲ್ಲಿ ಸಾಮಾನ್ಯವಾಗಿ ದಿನಕ್ಕೆ 19.6 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಸಾಗಾಣಿಕೆ ಆಗುತ್ತದೆ. ಆದರೆ ಮಾರ್ಚ್ 1ರಿಂದ ಈ ಪ್ರಮಾಣ 2.8 ಮಿಲಿಯನ್ ಬ್ಯಾರಲ್ಗೆ ಇಳಿದಿದೆ ಎಂಬ ಅಂಕಿಅಂಶಗಳು ಆತಂಕ ಹುಟ್ಟಿಸಿವೆ.
ತೈಲ ಸಾಗಣೆಯಲ್ಲಿ ಶೇಕಡಾ 86ರಷ್ಟು ಕುಸಿತ ಕಂಡುಬಂದಿರುವುದು ಜಾಗತಿಕ ಇಂಧನ ಭದ್ರತೆಗೆ ದೊಡ್ಡ ಹೊಡೆತವಾಗಿದೆ. ಕಚ್ಚಾತೈಲದ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬರುತ್ತಿದ್ದು, ಕೆಲವು ವಹಿವಾಟುಗಳಲ್ಲಿ ವಿಪರೀತ ಏರಿಕೆಯೂ ದಾಖಲಾಗಿದೆ.
ಭಾರತಕ್ಕೆ ಆಮದು ಆಗುವ ಕಚ್ಚಾತೈಲದಲ್ಲಿ ಸುಮಾರು 60% ಭಾಗ ಇದೇ ಮಾರ್ಗದ ಮೂಲಕ ಬರುತ್ತದೆ. ಹೀಗಾಗಿ ಜಲಸಂಧಿ ಸಮಸ್ಯೆ ಮುಂದುವರಿದರೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ತಳ್ಳಿ ಹಾಕಲು ಸಾಧ್ಯವಿಲ್ಲ. ಬೆಲೆ ಏರಿಕೆ, ವಿತರಣಾ ಅಡಚಣೆ ಹಾಗೂ ರೇಷನ್ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಜಾಗತಿಕ ರಾಜಕೀಯ ತೀವ್ರತೆ ಕಡಿಮೆಯಾಗದಿದ್ದರೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇಂಧನ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಪರ್ಯಾಯ ಮಾರ್ಗಗಳು ಹಾಗೂ ಸಂಗ್ರಹಿತ ತೈಲ ಭಂಡಾರಗಳನ್ನು ಬಳಸುವ ಆಯ್ಕೆಯನ್ನು ಪರಿಗಣಿಸಬಹುದು ಎನ್ನಲಾಗಿದೆ.
ಒಟ್ಟಿನಲ್ಲಿ, ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್ ಭಾರತದ ಸಾಮಾನ್ಯ ಜನರ ಜೇಬಿಗೆ ನೇರವಾಗಿ ಹೊಡೆತ ನೀಡುವ ಸಾಧ್ಯತೆ ಕಂಡುಬರುತ್ತಿದೆ. ಅಧಿಕೃತ ಪ್ರಕಟಣೆಗಾಗಿ ಇಂಧನ ಮಾರುಕಟ್ಟೆ ಕಾತರದಿಂದ ಕಾದು ಕುಳಿತಿದೆ.
