Ashwaveega News 24×7 ಮಾರ್ಚ್ 05 – 2026 : ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ದುಬೈನಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರು ಇದೀಗ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಬಳ್ಳಾರಿ ಮೂಲದ ಸುಮಾರು 54 ಮಂದಿ ಪ್ರವಾಸಿಗರು ದುಬೈನಿಂದ ಭಾರತಕ್ಕೆ ಮರಳಿ ಬಂದಿದ್ದು, ತಮ್ಮ ಕುಟುಂಬಗಳ ಜೊತೆ ಸೇರುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.
ದುಬೈನಿಂದ ಪ್ರಯಾಣಿಕ ವಿಮಾನದಲ್ಲಿ ಹೊರಟ ಈ ತಂಡ ಮೊದಲು ಕೊಚ್ಚಿಗೆ ಬಂದಿಳಿದಿತ್ತು. ಬಳಿಕ ಕೊಚ್ಚಿಯಿಂದ ಮತ್ತೊಂದು ವಿಮಾನದ ಮೂಲಕ ಬೆಂಗಳೂರಿಗೆ ತಲುಪಿದ್ದಾರೆ. ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿಳಿದ ಪ್ರವಾಸಿಗರನ್ನು ಬೆಂಗಳೂರಿನಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ವೇಳೆ ಶಾಸಕರಾದ ನಾಗೇಂದ್ರ ಅವರೊಂದಿಗೆ ನಾರಾ ಭರತ್ ರೆಡ್ಡಿ ಹಾಗೂ ಸಂಸದ ತುಕರಾಂ ಸಹ ಪ್ರವಾಸಿಗರಿಗೆ ಅಗತ್ಯ ಸಹಾಯ ಒದಗಿಸಿದ್ದಾರೆ. ಜನಪ್ರತಿನಿಧಿಗಳ ನೆರವನ್ನು ನೆನೆದು ಪ್ರವಾಸಿಗರು ಭಾವುಕರಾದರು.
ದುಬೈನಲ್ಲಿ ಸಂಕಷ್ಟದಲ್ಲಿದ್ದ ವೇಳೆ ತಮ್ಮನ್ನು ಸಂಪರ್ಕಿಸಿ ನೆರವು ನೀಡಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರವಾಸಿಗರು ಧನ್ಯವಾದ ಸಲ್ಲಿಸಿದರು. ಜೊತೆಗೆ ತಾವು ಸುರಕ್ಷಿತವಾಗಿ ವಾಪಸ್ ಬರಲು ಸಹಕಾರ ನೀಡಿದ ರಾಜ್ಯ ಸರ್ಕಾರಕ್ಕೂ ಕೃತಜ್ಞತೆ ವ್ಯಕ್ತಪಡಿಸಿದರು.
ಒಟ್ಟಾರೆ ಕೆಲ ದಿನಗಳ ಆತಂಕದ ನಂತರ ತಮ್ಮ ಊರಿಗೆ ಸುರಕ್ಷಿತವಾಗಿ ಮರಳಿದ ಕನ್ನಡಿಗರು ಈಗ ಕುಟುಂಬದ ಜೊತೆ ನೆಮ್ಮದಿಯ ಉಸಿರೆಳೆದಿದ್ದಾರೆ.
