Ashwaveega News 24×7 ಮಾರ್ಚ್ 05 – 2026 : ಸ್ನೇಹಿತರೆ ನೀವು ನಿಜವಾದ ನೈಜ ದೇಶ ಅಭಿಮಾನಿಗಳು ಆಗಿದ್ದರೆ ದೇಶಕ್ಕಾಗಿ ಏನಾದರು ಮಾಡಬೇಕು ನನ್ನ ಕೈಲಾದ್ದು ಎನ್ನುವ ಹಪಾಹಪಿ ತುಡಿತ ನಿಮ್ಮೊಳಗಿದ್ದರೆ ರೆಬೆಲ್ ಹಾಗು ಪ್ರಾಮಾಣಿಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಐ,ಎ,ಎಸ್, ಅಧಿಕಾರಿ ಬಾಲಸುಬ್ರಮಣ್ಯಂ ಅವರ ಕಲ್ಯಾಣ ಕೆಡುವ ಹಾದಿಯಲ್ಲಿ ಪುಸ್ತಕ ದಯವಿಟ್ಟು ಓದಿ ಇದನ್ನು ಓದಿ ಎಂದು ನಿಮಗೆ ಹೇಳುವುದೋ, ಬೇಡವೋ, ಎನ್ನುವುದು ನನ್ನದು ಒಂದು ಜಿಜ್ಞಾಸೆ. ಏಕೆಂದರೆ ಕೈಲಾಗದವನು ಮೈ ಪರಚಿಕೊಂಡ ಎನ್ನುವಂತಾಗುತ್ತದೆ. ಏನನ್ನೂ ಮಾಡಲಾಗದ ಯಾವುದನ್ನು ಸರಿಪಡಿಸಲಾಗದ ಮಟ್ಟಕ್ಕೆ ಕುಸಿತ ಕಂಡಿದೆ. ಇನ್ನೂ ಈ ದೇಶಕ್ಕೆ ದೇವರೇ ದಿಕ್ಕು ಎನ್ನುವ ಹತಾಶೆ ಪಾತಾಳವನ್ನು ತಲುಪಿದೆ.
ನೀವು ಏನೇ ಮಾಡಿದರೂ ಹೊಳೆಯಲ್ಲಿ ಹುಣಸೆ ತೊಳೆದಂತೆ ಎನ್ನುವಂತಾಗುತ್ತದೆ ನಮ್ಮನ್ನು ಆಳುವ ರಾಜಕಾರಣಿಗಳು ಅಧಿಕಾರಿಗಳು ನ್ಯಾಯಾಂಗ ವ್ಯವಸ್ಥೆಗಳು ಎಲ್ಲವೂ ಗಬ್ಬೆದ್ದು ಹೋಗಿರುವುದಕ್ಕೆ ನಿದರ್ಶನ ಈ ಪುಸ್ತಕ .
ಭ್ರಷ್ಟಾಚಾರದ ಸುವರ್ಣ ಯುಗವನ್ನು ಸ್ಥಾಪಿಸಿದ ತಿಂಗಳು ಇಂತಿಷ್ಟು ಕಲೆಕ್ಷನ್ ಕೊಡಬಲ್ಲ ಅಧಿಕಾರಿಗಳನ್ನೇ ಆಯಕಟ್ಟಿನ ಜಾಗದಲ್ಲಿ ಕುಳ್ಳರಿಸುವ ರಾಜಕಾರಣದ ಹೊಸ ಪರಂಪರೆ ಪ್ರಾರಂಭಿಸಿದ ರಾಜಾ ರೋಷವಾಗಿ ಭ್ರಷ್ಟಾಚಾರಗಳನ್ನು ಮಾಡಲು ಹೆದ್ದಾರಿ ನಿರ್ಮಿಸಿದ ಕ್ಲಾಸಿಕ್ ಕಂಪ್ಯೂಟರ್ ಹಗರಣ ಕಣ್ಣೆದುರೇ ಇದ್ದರೂ ಸದನದ ತೀರ್ಮಾನ ಎಂದು ಎಲ್ಲ ಸಜ್ಜನರಿಂದಲೂ ಹೇಳಿಕೆ ಕೊಡಿಸಿ, ನ್ಯಾಯಾಂಗ ಕಿರಿಕರಿಗಳಿಂದ ತಪ್ಪಿಸಿಕೊಂಡ ರಾಜಕಾರಣದಲ್ಲಿ ಸಜ್ಜನಿಕೆ ಇಲ್ಲವೇ ಇಲ್ಲ ಏನಿದ್ದರೂ ಲಂಚ ಲೂಟಿ ನೋಡಿಕೊಂಡು ಸುಮ್ಮನೆ ಇರು ಎನ್ನುವ ಸಜ್ಜನಿಕೆಯ ಹೊಸ ವ್ಯಾಖ್ಯಾನವನ್ನೇ ಹುಟ್ಟು ಹಾಕಿದ ಸಾರೆಕೊಪ್ಪ ಬಂಗಾರಪ್ಪ

ಬೆಳಿಗ್ಗೆ 11ರಿಂದ ಸಂಜೆ 7ರ ಸಮಯಕ್ಕೆ ಮಾತ್ರ ಮುಖ್ಯಮಂತ್ರಿ ಅವನಿಗೆ ಪಿಂಪ್ ಕೆಲಸವನ್ನು ಮಾಡುತ್ತಿದ್ದ ಮಧ್ಯ ವಯಸ್ಕ ನಟ ಹಾಗೂ ಸಚಿವನೊಂದಿಗೆ ಸೇರಿ ಲಂಪಟ ಸ್ವೇಚ್ಛಾಚಾರಿ ಜೀವನ ಶೈಲಿಯಲ್ಲಿ ಮಧ್ಯ ಮಾನನಿಗಳ ಜೊತೆಯಲ್ಲೇ ಕಾಲ ಕಳೆದ ಜೆ ,ಹೆಚ್, ಪಟೇಲರು. ವೈಟ್ ಕಾಲರ್ ಭ್ರಷ್ಟಾಚಾರಿ ಎಂದೇ ಹೇಳಬಹುದಾದ ಸೋಮನಹಳ್ಳಿ ಕೃಷ್ಣ , ಇತ್ಯಾದಿ ಎಲ್ಲವೂ ಅನಾವರಣಗೊಂಡಿವೆ.
ಭ್ರಷ್ಟಾಚಾರವನ್ನ ಹೆದ್ದಾರಿ ವೇಗದಿಂದ ವಾಯು ವೇಗಕ್ಕೆ ಪರಿವರ್ತಿಸಿದ ಹೆಗ್ಗಳಿಕೆ ಭೂ ಮಾಫಿಯಾ ತಪ್ಪಿಸಲು ಜಾರಿಗೆ ತಂದ ಆಯೋಗವನ್ನೇ ರದ್ದುಗೊಳಿಸಿ ತಮಗೆ ಬೇಕಾದಂತೆ ಕಾನೂನುಗಳನ್ನು ತಿದ್ದಿಕೊಂಡ , ಕಂದಾಯ ಮಂತ್ರಿ ಕರುಣಾಕರ ರೆಡ್ಡಿ ತಾಳಕ್ಕೆ ತಕ್ಕಂತೆ ಕುಣಿದ ಯಡಿಯೂರಪ್ಪನವರು ತುಂಬಾ ಓದಿಕೊಂಡ ಐ.ಎ.ಎಸ್. ವರ್ಗದವರ ಜಾತೀಯ ಅಮಲುಗಳು ,
ಖಜಾನೆ ತಳಕ್ಕೆ ತೂತನಿಕ್ಕಿ ಹೆಗ್ಗಣದಂತೆ ಮೇಯಲು ಅಧಿಕಾರಿಗಳನ್ನು ಬಿಟ್ಟಿರುವ ಜನಪ್ರತಿನಿಧಿಗಳು, ಸರ್ಕಾರವನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಮಠಾಧಿಪತಿಗಳು, ರಾಜಕಾರಣಿಗಳೆಲ್ಲಾ ದೇಶದ್ರೋಹಿಗಳು, ಭ್ರಷ್ಟಾಚಾರಿಗಳು, ಪರಮಲಂಪಟರು ಎಂದು ಗೊತ್ತಿದ್ದರೂ ಅವರದೇ ಪಕ್ಷಪಾತ ವಹಿಸುವ ಸಾಹಿತಿಗಳು, ಹೋರಾಟಗಾರರು, ಎಲ್ಲವೂ ಗೊತ್ತಿದ್ದರೂ ಸಮಾಜಕ್ಕೆ ಸತ್ಯವನ್ನು ತಿಳಿಸದೆ ದುಡ್ಡು ಕೊಟ್ಟವರನ್ನೇ ಇಂದ್ರ, ಚಂದ್ರ, ಎಂದು ಹೊಗಳಿಕೊಂಡು ತಮ್ಮನ್ನೇ ತಾವು ಮಾರಿಕೊಂಡ ಮಾಧ್ಯಮಗಳು.

ತಿಳಿಯಲೇಬೇಕಾದ ವಿಷಯಗಳು ನಿಮಗೆ ಒಂದೇ ಎರಡೇ,ಉಸ್ಸಪ್ಪಾ……. ಇನ್ನೇನಪ್ಪಾ ಈ ದೇಶದ ಕಥೆ, ಎನ್ನುವಂತೆ ಆಗುತ್ತದೆ.ನಾನು ಕಾಂಗ್ರೆಸ್ಸು, ನಾನು ಬಿಜೆಪಿ ಎಂದು ಬಡಿದಾಡುವ ಕಾರ್ಯಕರ್ತರನ್ನು ನೋಡಿದಾಗ ಅಯ್ಯೋ ಪಾಪ ಈ ದೇಶಕ್ಕೆ ಭವಿಷ್ಯ ಇದೆಯೇ ಎನಿಸುತ್ತದೆ .
ಏನು ಮಾಡೋದು ಕೈಲಾಗದವನು ಮೈ ಪರಚಿ ಕೊಂಡ ಎಂದು ನಾನಾಗಲೇ ಹೇಳಿದಂತೆ ಆಗುತ್ತದೆ.
ಆದರೂ ಚಿಂತೆ ಇಲ್ಲ ಓದಿಬಿಡಿ ಕೈಲಾಗದವನು ಮೈ ಪರಚಿಕೊಳ್ಳಲೇಬೇಕು ಆ ಪರಚುವಿಕೆಯಲ್ಲಿ ನಿಮ್ಮ ಕುಂಡಲಿನಿ ಶಕ್ತಿ ಜಾಗೃತವಾಗಬಹುದು, ಯಾವುದಾದರೂ ಮಾರ್ಗ ತೆರೆದುಕೊಳ್ಳಬಹುದು, ಎಲ್ಲರೂ ಓದಿದಾಗ ಒಂದು ಜನ ಮತ ರೂಪಿತವಾಗಿ ಮುಂದಿನ ದಿನಗಳಿಗೆ ರಾಜಕಾರಣಕ್ಕೆ ನಿರ್ದಿಷ್ಟ ದಿಕ್ಕು, ದೆಸೆ ,ಮಾನದಂಡಗಳು, ರೂಪಿತವಾಗಬಹುದು. ಎನ್ನುವ ಆಶಾವಾದ ಇಟ್ಟುಕೊಂಡು ತಪ್ಪದೆ ಎಲ್ಲರೂ ಓದಬೇಕಾಗಿ ವಿನಂತಿಸಿಕೊಳ್ಳುತ್ತೇನೆ
ಓದಿ ಬದಲಾಗಬೇಕು, ಹೊಸ ಚಿಂತನೆ, ಹೊಸ ಬೆಳಕು, ಹೊಸ ದಾರಿ ತೆರೆದುಕೊಳ್ಳಬಹುದು, ಇದಾಗದಿದ್ದರೆ ನೀವು ಓದಿದ್ದು ವ್ಯರ್ಥ. ಇನ್ನು ಇದ್ದವರು ಇಬ್ಬರು ಕದ್ದವರು ಯಾರು ಎನ್ನುವಂತಾಗಿರುವ ಸರಿಪಡಿಸಲಾಗದ ಹಳೆಯ ಮನೆಯಂತಾಗಿರುವ, ಗಬ್ಬೆದ್ದು ನಾರುವ ಗಟಾರದಂತಾಗಿರುವ ಎಲ್ಲವನ್ನು ಕೆಡವಿ ಹೊಸದನ್ನು ಕಟ್ಟಲೇ ಬೇಕಾಗಿರುವ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ಅದರಲ್ಲೇ ಇರುತ್ತೇನೆ ಅವುಗಳನ್ನೇ ಸರಿ ಮಾಡುತ್ತೇನೆ ಎನ್ನುವ ಮನಸ್ಥಿತಿಯವರು ಇದನ್ನು ಓದಲೇಬೇಕು…
