Ashwaveega News 24×7 ಮಾರ್ಚ್ 06 – 2026 : ರಾಜ್ಯದ ಜನರು ಕಾದಿದ್ದ ಕ್ಷಣ ಸಮೀಪಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ಕ್ಷಣಗಳಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಒತ್ತು ಸಿಗುವ ನಿರೀಕ್ಷೆ ಇದ್ದು, ವಿವಿಧ ವಲಯಗಳಿಗೂ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ
ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆಗೆ ಕೌಂಟ್ಡೌನ್ ಶುರುವಾಗಿದೆ. ರಾಜ್ಯದ ಜನರಿಗೆ ಹಾಗೂ ವಿವಿಧ ವಲಯಗಳಿಗೆ ಈ ಬಜೆಟ್ ಯಾವ ರೀತಿಯ ಸಂದೇಶ ನೀಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ
ಈ ಬಾರಿ ಬಜೆಟ್ನಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಿಗೆ ಮತ್ತಷ್ಟು ಒತ್ತು ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದರ ಜೊತೆಗೆ ವರ್ಷಕ್ಕೆ ಎರಡು ಸೀರೆ ನೀಡುವ ಘೋಷಣೆ ಮಾಡಬಹುದೇ ಎಂಬ ಚರ್ಚೆ ಕೂಡ ಜೋರಾಗಿದೆ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ‘ಇಂದಿರಾ ಕಿಟ್’ ಘೋಷಣೆ ಮಾಡುವ ಸಾಧ್ಯತೆಗಳೂ ಕೇಳಿಬರುತ್ತಿವೆ. ಜೊತೆಗೆ ವಸತಿ ಹಂಚಿಕೆ ಗೊಂದಲ ನಿವಾರಣೆ ಮಾಡಿ ಮನೆಗಳನ್ನು ವಿತರಿಸುವ ಘೋಷಣೆ ಕೂಡ ಬಜೆಟ್ನಲ್ಲಿ ಇರಬಹುದು ಎನ್ನಲಾಗುತ್ತಿದೆ.
ಇನ್ನೊಂದೆಡೆ ಕೃಷಿ, ಕೈಗಾರಿಕೆ, ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವಂತೆ ವಿವಿಧ ವಲಯಗಳಿಂದ ಸರ್ಕಾರಕ್ಕೆ ಹತ್ತಾರು ಬೇಡಿಕೆಗಳು ಬಂದಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಅನುದಾನ ನೀಡುವ ನಿರೀಕ್ಷೆಯೂ ಇದೆ.
ರಾಜ್ಯದಲ್ಲಿ ಹದಗೆಟ್ಟಿರುವ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆಯೂ ಇದೆ. ಗ್ಯಾರಂಟಿ ಯೋಜನೆಗಳಿಗೆ ಕಡಿವಾಣ ಹಾಕದೇ ಆರ್ಥಿಕ ಶಿಸ್ತು ಕಾಪಾಡುವ ಸವಾಲು ಕೂಡ ಸರ್ಕಾರದ ಮುಂದೆ ಇದೆ.
ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಅವರು 4 ಲಕ್ಷ 9 ಸಾವಿರ 549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿ ಬಜೆಟ್ ಗಾತ್ರ ಸುಮಾರು 4 ಲಕ್ಷ 50 ಸಾವಿರ ಕೋಟಿ ರೂಪಾಯಿ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಒಟ್ಟಾರೆ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಮುಂಬರುವ ಸ್ಥಳೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡನೆಯಾಗುತ್ತದೆಯೇ ಎಂಬುದು ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.
