Ashwaveega News 24×7 ಮಾರ್ಚ್ 25 – 2026 : ಬೆಂಗಳೂರು : ನಿರ್ದೇಶಕ ಹಾಗೂ ನಟ Aryan Tejas ಅವರ ಬಹು ನಿರೀಕ್ಷಿತ ‘ನಾನು ಕರುಣಾಕರ’ ಚಿತ್ರದ ಆಡಿಯೋ ಮತ್ತು ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ತಂದೆ-ಮಗನ ಬಾಂಧವ್ಯವನ್ನು ಕೇಂದ್ರವಾಗಿಟ್ಟುಕೊಂಡ ಈ ಚಿತ್ರ ಪ್ರೇಕ್ಷಕರ ಮನಸಿಗೆ ಹತ್ತಿರವಾಗುವ ನಿರೀಕ್ಷೆಯಿದೆ .
ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಆರ್ಯನ್ ತೇಜಸ್, ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ಈ ಹಿಂದೆ ‘ಪಾರ್ಕ್ ರೋಡ್ 100 ರೂಪಾಯಿ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಅವರು, ಈ ಕಥೆಯನ್ನು ಕೊರೊನಾ ಕಾಲಕ್ಕೂ ಮುನ್ನವೇ ಸಿದ್ಧಪಡಿಸಿದ್ದಾಗಿ ತಿಳಿಸಿದ್ದಾರೆ.
ಚಿತ್ರವನ್ನು Naman Narayan ಮತ್ತು Vaibhav Suresh ನಿರ್ಮಿಸಿದ್ದು, ಸಂತೋಷ್ ಮತ್ತು ಶ್ರೀಕಾಂತ್ ಸಹ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ‘ಪಾಪ್ ಕಾರ್ನ್ ಸಿನಿಮಾ ಪ್ರೊಡಕ್ಷನ್ಸ್’ ಮೂಲಕ ಚಿತ್ರ ನಿರ್ಮಾಣವಾಗಿದೆ .

ಈ ಚಿತ್ರದಲ್ಲಿ ನಾಯಕಿಯಾಗಿ Radha Bhagavathi ಕಾಣಿಸಿಕೊಂಡಿದ್ದು, ಮಗನ ಪಾತ್ರದಲ್ಲಿ ಮಾಸ್ಟರ್ ಭವೀಶ್ ಅಭಿನಯಿಸಿದ್ದಾರೆ. ಜೊತೆಗೆ ಕರಿಸುಬ್ಬು, ಎಂಕೆ ಮಠ, ಬಿ.ಎಂ. ವೆಂಕಟೇಶ್, ಅಪೂರ್ವ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಕಥೆ ಮಧ್ಯಮ ವರ್ಗದ ಕುಟುಂಬದ ಬದುಕಿನ ಸುತ್ತ ಹೆಣೆದಿದ್ದು, ಅಪ್ಪ-ಮಗನ ಬಾಂಧವ್ಯ ಹಾಗೂ ಗಂಡ-ಹೆಂಡತಿಯ ಸಂಬಂಧವನ್ನು ಸ್ಪರ್ಶಿಸುತ್ತದೆ. ಮೈಸೂರು, ಮೇಲುಕೋಟೆ ಹಾಗೂ ಬೆಂಗಳೂರಿನ ಯಲಹಂಕ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ನಾಯಕ ಆರ್ಯನ್ ತೇಜಸ್ ಮಾತನಾಡಿ, “ಪ್ರತಿಯೊಬ್ಬರ ಮನೆಯಲ್ಲೂ ಒಬ್ಬ ಕರುಣಾಕರ ಇರುತ್ತಾನೆ. ಕುಟುಂಬವನ್ನು ಸಾಗಿಸಲು ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ಎಷ್ಟು ಕಷ್ಟಪಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ” ಎಂದರು.
ನಾಯಕಿ ರಾಧಾ ಭಗವತಿ ಮಾತನಾಡಿ, “ಇದು ನನ್ನ ಐದನೇ ಚಿತ್ರ . ಮಧ್ಯಮ ವರ್ಗದ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತನ್ನ ಕನಸುಗಳನ್ನು ಬದಿಗೊತ್ತಿ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಹೆಣ್ಣಿನ ಬದುಕನ್ನು ಚಿತ್ರಿಸಿದೆ” ಎಂದು ತಿಳಿಸಿದರು.

ನಿರ್ಮಾಪಕ ವೈಭವ್ ಸುರೇಶ್ ಮಾತನಾಡಿ, “ಒಳ್ಳೆಯ ಸಿನಿಮಾ ಮಾಡಬೇಕೆಂಬ ಕನಸು ಈ ಚಿತ್ರದ ಮೂಲಕ ನನಸಾಗಿದೆ” ಎಂದರು. ಮತ್ತೊಬ್ಬ ನಿರ್ಮಾಪಕ ನಮನ್ ನಾರಾಯಣ, “ಈ ಕಥೆ ನನ್ನ ತಂದೆಯ ನೆನಪನ್ನು ಮೂಡಿಸಿತು. ಇಂತಹ ಎಲ್ಲಾ ತಂದೆಗಳಿಗೆ ಈ ಸಿನಿಮಾ ಅರ್ಪಣೆ” ಎಂದು ಹೇಳಿದರು.
ಚಿತ್ರದ ಟ್ರೈಲರ್ಗೆ Srinagar Kitty ವಾಯ್ಸ್ ನೀಡಿರುವುದು ವಿಶೇಷ. ಸ್ನೇಹಿತನ ಪಾತ್ರದಲ್ಲಿ ಲೋಕೇಶ್ ಹಾಗೂ ಪೇಂಟರ್ ಪಾತ್ರದಲ್ಲಿ ಕರಿಸುಬ್ಬು ಅಭಿನಯಿಸಿದ್ದಾರೆ.
ಇದೀಗ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿರುವ ‘ನಾನು ಕರುಣಾಕರ’ ಚಿತ್ರ ಏಪ್ರಿಲ್ 3ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
