Ashwaveega News 24×7 ಏಪ್ರಿಲ್ 3 – 2026 : ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಆಕರ್ಷಕ ಜಾಹೀರಾತುಗಳ ಹಿಂದೆ ಸೈಬರ್ ವಂಚಕರು ಹೇಗೆ ಅಡಗಿರುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಬೆಳಕಿಗೆ ಬಂದಿದೆ. ಕೇರಳ ಲಾಟರಿ ಗೆದ್ದಿದ್ದೀರಿ ಎಂದು ನಂಬಿಸಿ, ಬೆಂಗಳೂರಿನ ಪ್ಲಂಬಿಂಗ್ ಕೆಲಸಗಾರನೊಬ್ಬರಿಂದ ಹಂತ ಹಂತವಾಗಿ ಹಣ ಕಸಿದುಕೊಂಡಿರುವ ಘಟನೆ ನಡೆದಿದೆ.
ಅಂಬದಾಸ್ ಎಂಬ ವ್ಯಕ್ತಿ ಇನ್ಸ್ಟಾಗ್ರಾಂ ನೋಡುತ್ತಿದ್ದ ವೇಳೆ ಲಾಟರಿ ಸಂಬಂಧಿತ ಜಾಹೀರಾತೊಂದು ಕಾಣಿಸಿಕೊಂಡಿದೆ. ಅದನ್ನು ಕ್ಲಿಕ್ ಮಾಡುತ್ತಿದ್ದಂತೆ ವಾಟ್ಸಾಪ್ ಮೂಲಕ ಸಂದೇಶ ಬಂದು, “ನೀವು ಕೇರಳ ಲಾಟರಿಯಲ್ಲಿ 4ನೇ ಬಹುಮಾನ ಗೆದ್ದಿದ್ದೀರಿ, ₹8 ಲಕ್ಷ ನಿಮ್ಮದಾಗಿದೆ” ಎಂದು ತಿಳಿಸಲಾಗಿದೆ.
ಮುಂದೆ, ಬಹುಮಾನ ಪಡೆಯಲು ಮೊದಲು ಜಿಎಸ್ಟಿ ಪಾವತಿಸಬೇಕು ಎಂದು ಹೇಳಿ ₹20,000 ಹಣ ಕಳುಹಿಸಲು ಸೂಚಿಸಲಾಗಿದೆ. ಲಾಟರಿ ಬಂದ ಸಂತೋಷದಲ್ಲಿ ಅಂಬದಾಸ್ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ “ಸೆಂಟ್ರಲ್ ಜಿಎಸ್ಟಿ” ಹೆಸರಿನಲ್ಲಿ ₹25,000 ಮತ್ತಷ್ಟು ಕೇಳಲಾಗಿದೆ.
ಅದರಲ್ಲೇ ನಿಲ್ಲದೇ, ಟಿಡಿಎಸ್ ಪಾವತಿಸಬೇಕು ಎಂದು ಮತ್ತೆ ಸಂದೇಶ ಕಳುಹಿಸಿ, ಹಂತ ಹಂತವಾಗಿ ಇನ್ನಷ್ಟು ಹಣ ಪಡೆದುಕೊಂಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ನಿಜವೆಂದು ನಂಬಿದ ಅಂಬದಾಸ್, ವಂಚಕರಿಗೆ ಹಣ ಕಳುಹಿಸುತ್ತಲೇ ಇದ್ದರು.
ಹಣ ಸಂಪೂರ್ಣವಾಗಿ ಪಡೆದ ಬಳಿಕ, ವಂಚಕರು ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ಮೋಸ ನಡೆದಿರುವುದು ತಿಳಿದು, ಅಂಬದಾಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಅಪರಾಧಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.
