Ashwaveega News 24×7 ಏಪ್ರಿಲ್ 11 – 2026 : ಬೆಳಗಾವಿ : ಸೈಬರ್ ಅಪರಾಧಿಗಳ ಹೊಸ ತಂತ್ರ ‘ಡಿಜಿಟಲ್ ಅರೆಸ್ಟ್’ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣವನ್ನು ಬೆಳಗಾವಿ ಸೈಬರ್ ಪೊಲೀಸರು ಭೇದಿಸಿದ್ದಾರೆ. ಸಿಬಿಐ ತನಿಖೆ ಆರಂಭಕ್ಕೂ ಮುನ್ನವೇ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಹೈದ್ರಾಬಾದ್ ಮೂಲದ ಶ್ರೀಪಾದ ಮತ್ತು ಶರದ್ ನಾಯಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರು ಸಿಬಿಐ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡಿದ್ದರು .
ಆರೋಪಿಗಳು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಭೀತಿ ಹುಟ್ಟಿಸಿ, ಉದ್ಯಮಿಯಿಂದ ಒಟ್ಟು 15.45 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಉದ್ಯಮಿಯ ಬ್ಯಾಂಕ್ ಖಾತೆಯಿಂದ 10 ವಿಭಿನ್ನ ‘ಫಸ್ಟ್ ಲೇಯರ್’ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು .
ಅನಂತರ, ದೇಶದ ಆರು ಪ್ರಮುಖ ರಾಜ್ಯಗಳಲ್ಲಿ ತೆರೆಯಲಾಗಿದ್ದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಹರಿಬಿಡಲಾಗಿದೆ. ನಕಲಿ ಕಂಪನಿಗಳ ಹೆಸರಿನಲ್ಲಿ ತೆರೆಯಲಾದ ಖಾತೆಗಳಿಗೆ ಸುಮಾರು 2 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಈಗಾಗಲೇ ಸುಮಾರು 1 ಕೋಟಿ ರೂಪಾಯಿ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದು, ಇನ್ನೂ ಹೆಚ್ಚಿನ ಮೊತ್ತವನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರೆದಿದೆ. ಸುಮಾರು 390ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಮೂಲಕ 14 ಕೋಟಿ ರೂಪಾಯಿ ಹಣವನ್ನು ಹಿಂಪಡೆಯಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ರೀತಿಯ ಸೈಬರ್ ವಂಚನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಜನರು ಇಂತಹ ಕರೆಗಳು ಮತ್ತು ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
