
ಬೆಂಗಳೂರು: ಜಲಮಂಡಳಿ ಕುಡಿಯುವ ನೀರಿನ ದರವನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದು, ಇದಕ್ಕೆ ತ್ವರಿತವನ್ನು ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ‘ಜಲಮಂಡಳಿ ಉಳಿಸಲು ಮತ್ತು ಅಭಿವೃದ್ಧಿಗೊಳಿಸಲು ನೀರಿನ ದರ ಏರಿಕೆ ಅನಿವಾರ್ಯ’ ಎಂದು ಹೇಳಿದ್ದು, ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಕ್ಕಿದೆ.
ಸರ್ಕಾರಕ್ಕೆ ಶೀಘ್ರದಲ್ಲಿಯೇ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಕನಿಷ್ಠ ನೀರಿನ ದರ 56 ರೂ. ಇದ್ದು, 8,000 ಲೀಟರ್ ನೀರು ಬಳಕೆ ಮಾಡುವವರಿಗೆ ಸಾವಿರ ಲೀಟರ್ಗೆ 7 ರೂ. ಶುಲ್ಕವಿದೆ. 8,000- 25,000 ಲೀಟರ್ ನೀರು ಬಳಸುವವರಿಗೆ ಸಾವಿರ ಲೀಟರ್ಗೆ 11 ರೂ. ದರವಿದ್ದು, 25,000- 50,000 ಲೀಟರ್ ನೀರು ಬಳಕೆ ಮಾಡುವ ಗ್ರಾಹಕರಿಗೆ ಸಾವಿರ ಲೀಟರ್ಗೆ 26 ರೂ. ಶುಲ್ಕ ಇದೆ.
ಜಲಮಂಡಳಿಯ ಆದಾಯದ ಬಹುಪಾಲು ಮೊತ್ತ ವಿದ್ಯುತ್ ವೆಚ್ಚಕ್ಕೆ ವ್ಯಯವಾಗುತ್ತಿದೆ. ಪ್ರತಿ ತಿಂಗಳು ನೀರಿನ ದರ ಸಂಗ್ರಹ ಸೇರಿ ವಿವಿಧ ಮೂಲಗಳಿಂದ ₹119 ಕೋಟಿ ಆದಾಯವನ್ನು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಶೇ.55-60 ಮೊತ್ತವನ್ನು ವಿದ್ಯುತ್ ಶುಲ್ಕ ಕಟ್ಟಲು ಖರ್ಚಾಗುತ್ತಿದೆ. ಉಳಿದ ಹಣದಲ್ಲಿ ಜಲಮಂಡಳಿ ಇತರೆ ವೆಚ್ಚಗಳನ್ನು ನಿಭಾಯಿಸುತ್ತಿದೆ.
ಜಲಮಂಡಳಿ 8,000 ಲೀಟರ್ ನೀರು ಬಳಕೆ ದರವನ್ನು ಹೆಚ್ಚಿಸದಿರಲು ನಿರ್ಧರಿಸಿದ್ದು, 8,000-25,000 ಲೀಟರ್ ನೀರು ಬಳಕೆ ಮಾಡುವವರಿಗೆ ಸಾವಿರ ಲೀಟರ್ಗೆ ₹11-15 ದರವನ್ನು ಹೆಚ್ಚಿಸಲು, 25,000-50,000 ಲೀಟರ್ ನೀರು ಬಳಕೆ ಮಾಡುವವರಿಗೆ ಸಾವಿರ ಲೀಟರ್ಗೆ ₹26-30 ದರವನ್ನು ಹೆಚ್ಚಿಸಲು ಮುಂದಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.