
ದಿನಬಳಕೆ ವಸ್ತುಗಳ ದರ ಏರಿಕೆಗೆ ತತ್ತರಿಸಿಹೋಗಿರುವ ಬೆಂಗಳೂರಿಗರ ಮೇಲೆ ಸರ್ಕಾರ ಮತ್ತೊಂದು ಬರೆ ಎಳೆಯಲು ಮುಂದಾಗಿದೆ. ನಮ್ಮ ಮೆಟ್ರೋ ರೈಲು ಪ್ರಯಾಣ ದರ, ನೀರಿನ ಶುಲ್ಕ, ಬಸ್ ಟಿಕೆಟ್ ದರ ಏರಿಕೆಯ ನಂತರ ಇದೀಗ ಮನೆಯಿಂದ ಹೊರಹಾಕುವ ತ್ಯಾಜ್ಯಕ್ಕೂ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿದೆ. ನಗರದಲ್ಲಿ ಏಪ್ರಿಲ್ 1ರಿಂದ ಪ್ರತಿ ಮನೆಯಿಂದ ಸಂಗ್ರಹಿಸುವ ಕಸಕ್ಕೂ ಶುಲ್ಕ ವಸೂಲಿಗೆ ಸರ್ಕಾರ ಅನುಮೋದನೆ ನೀಡಿದ್ದು, ತ್ಯಾಜ್ಯ ವಿಲೇವಾರಿಗೆ ಇನ್ನು ಮುಂದೆ ಶುಲ್ಕ ನೀಡಬೇಕಿದೆ. ತ್ಯಾಜ್ಯ ಸಂಸ್ಕರಣೆ ಮಾಡದ ಅಪಾರ್ಟ್ಮೆಂಟ್ಗಳು ದೊಡ್ಡ ವಾಣಿಜ್ಯ ಸಂಸ್ಥೆಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರ ಮೇಲೆ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ 12 ರೂ, ಬಳಕೆದಾರ ಶುಲ್ಕ ವಿಧಿಸಲು ಸರ್ಕಾರವು ಅನುಮತಿ ನೀಡಿದೆ. ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರ ಶುಲ್ಕ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. 600 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 10,ರೂ, ಎಂಬಂತೆ, 1 ವರ್ಷಕ್ಕೆ 120ರೂ. ಪಾವತಿಸಬೇಕು, 4000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ತಿಂಗಳಿಗೆ ಗರಿಷ್ಠ 400 ರೂ, ವರ್ಷಕ್ಕೆ 4,800 ರೂ ಪಾವತಿಸಬೇಕಾಗಿದೆ ಎಂದು ಅಂದಾಜಿಸಲಾಗಿದ್ದು ಇದರ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.

ಅಭಿಷೇಕ್.ಎಸ್