
ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುವುದಕ್ಕೆ 5 ದಿನಗಳೇ ಬಾಕಿ ಉಳಿದಿವೆ. ಎಲ್ಲ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಇದರ ನಡುವೆ ಇತ್ತೀಚೆಗೆ ಮುಂಬೈ ಇಂಡಿಯನ್ಸ್ಗೆ ಬದಲಿ ಆಟಗಾರನ್ನಾಗಿ ಸೇರಿಕೊಂಡ ದಕ್ಷಿಣ ಆಫ್ರಿಕಾದ ವೇಗಿ ಕಾರ್ಬಿನ್ ಬಾಷ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಲೀಗಲ್ ನೋಟಿಸ್ ನೀಡಿದೆ. ನೋಟಿಸ್ ಕಳುಹಿಸಕ್ಕೆ ಪ್ರಮುಖ ಕಾರಣ ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಆಡದಿರುವ ತೀರ್ಮಾನ ಮಾಡಿರುವುದು. ಮೆಗಾ ಹರಾಜಿನಲ್ಲಿ ಕಾರ್ಬಿನ್ ಬಾಷ್ ಅವರನ್ನು ಯಾವ ತಂಡವೂ ಖರೀದಿ ಮಾಡಿರಲಿಲ್ಲ. ಹೀಗಾಗಿ ಅವರು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದರು. ಅದರಂತೆ ಹರಾಜಿನಲ್ಲಿ ಪೇಶಾವರ್ ಝಲ್ಮಿ ಫ್ರಾಂಚೈಸಿಯು ಬಾಷ್ ಅವರನ್ನುಖರೀದಿ ಮಾಡಿತ್ತು. ಇದೇ ವೇಳೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆ ಆಗಿದ್ದ ಮತ್ತೊಬ್ಬ ದಕ್ಷಿಣ ಆಫ್ರಿಕಾದ ಆಟಗಾರ ಲಿಝಾಡ್ ಅವರು ಗಾಯಕ್ಕೆ ಒಳಗಾಗಿ ಟೂರ್ನಿಯಿಂದ ಹೊರ ನಡೆದಿದ್ದರು.ಅವರ ಬದಲಿ ಆಟಗಾರನ್ನಾಗಿ ಇದೇ ಕಾರ್ಬಿನ್ ಬಾಷ್ ಅವರನ್ನು ಮುಂಬೈ ಇಂಡಿಯನ್ಸ್ ಆಯ್ಕೆ ಮಾಡಿಕೊಂಡಿತ್ತು. ಇತ್ತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ನಿಂದ ಕರೆ ಬಂದಿದ್ದೇ ತಡ ಕಾರ್ಬಿನ್ ಬಾಷ್ ಪಾಕಿಸ್ತಾನ ಸೂಪರ್ ಲೀಗ್ಗೆ ಗುಡ್ ಬೈ ಹೇಳಿ ಐಪಿಎಲ್ ಆಡಲು ನಿರ್ಧಾರಿಸಿದ್ದಾರೆ. ಅವರ ಈ ನಡೆಯಿಂದ ಸಿಟ್ಟುಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪಾಕಿಸ್ತಾನ ಸೂಪರ್ ಲೀಗ್ನಿಂದ ಹಿಂದೆ ಸರಿಯಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟತೆ ಕೇಳಿ ನೋಟಿಸ್ ಕಳುಹಿಸಿದೆ. ಅಲ್ಲದೇ ಇದು ಒಪ್ಪಂದದ ಉಲ್ಲಂಘನೆಯಾಗಿದ್ದು ಇದರ ಪರಿಣಾಮಗಳ ಬಗ್ಗೆ ಪಿಸಿಬಿ ತನ್ನ ಲೀಗಲ್ ನೋಟಿಸ್ನಲ್ಲಿ ಉಲ್ಲೇಖಿಸಿದೆ.

ಅಭಿಷೇಕ್.ಎಸ್