Ashwaveega News 24×7 ಸೆ. 23: ಹಲವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ಜಿಲ್ಲೆಯ ಹೊರಗೆ ಕಳುಹಿಸಲಾಗಿದೆ. ಗಡೀಪಾರು ಆದೇಶದ ಪ್ರಕಾರ, ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಲಾಗುತ್ತಿದೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿವಿಧ ಕಾನೂನು ಉಲ್ಲಂಘನೆ, ಅಶಾಂತಿ ಸೃಷ್ಟಿ ಹಾಗೂ ಸಮಾಜದಲ್ಲಿ ಅಸ್ಥಿರತೆ ಉಂಟುಮಾಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಮರೋಡಿ ಮೇಲೆ ಧರ್ಮಸ್ಥಳ ‘ಬುರುಡೆ ಪ್ರಕರಣ’ ಹಾಗು ‘ಶವ ಹೂತಿಟ್ಟ ಪ್ರಕರಣ’ಗಳಲ್ಲಿ ಆರೋಪಿಯಾಗಿದ್ದ ಚೆನ್ನಯ್ಯನಿಗೆ ಆಶ್ರಯ ನೀಡಿದ್ದ ಆರೋಪವೂ ಇದೆ. ಇದಲ್ಲದೇ ಸೌಜನ್ಯ ಹೋರಾಟ ಸೇರಿದಂತೆ ಹಲವು ಶಾಂತಿ ಕದಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಹಿನ್ನೆಲೆ, ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪುತ್ತೂರು ಸಹಾಯಕ ಆಯುಕ್ತರು ಸೆಪ್ಟೆಂಬರ್ 20 ರಂದು ಅಧಿಕೃತವಾಗಿ ಗಡೀಪಾರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಈ ಆದೇಶ ಜಾರಿಗೆ ಬಂದಿದೆ. ಈ ಕ್ರಮದ ಮೂಲಕ ಜಿಲ್ಲೆಯ ಜನರಲ್ಲಿ ಭಯ ಹಾಗೂ ಅಶಾಂತಿ ಕಡಿಮೆ ಮಾಡಿ, ಶಾಂತಿ ಸುವ್ಯವಸ್ಥೆ ಕಾಪಾಡುವುದು ಮುಖ್ಯ ಉದ್ದೇಶ ಎಂದು ಆಡಳಿತ ವಲಯ ತಿಳಿಸಿದೆ.
