Ashwaveega News 24×7 ನವೆಂಬರ್. 09: ವಿಜ್ಞಾನ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದ, ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿ ಹಾಗೂ ಡಿಎನ್ಎ ರಚನೆಯ ಸಹ ಆವಿಷ್ಕಾರಕರಾದ ಜೇಮ್ಸ್ ವಾಟ್ಸನ್ (97) ನಿಧನರಾಗಿದ್ದಾರೆ.
1953ರಲ್ಲಿ ಬ್ರಿಟಿಷ್ ವಿಜ್ಞಾನಿ ಫ್ರಾನ್ಸಿಸ್ ಕ್ರಿಕ್ ಅವರೊಂದಿಗೆ ಸೇರಿ ಡಿಎನ್ಎಯ ಡಬಲ್-ಹಿಲಿಕ್ಸ್ ರಚನೆಯನ್ನು ಇವರು ಗುರುತಿಸಿದ್ದರು. ಇದರಿಂದ ಆಣ್ವಿಕ ಜೀವಶಾಸ್ತ್ರದ ಸಂಶೋಧನೆಗೆ ಹೊಸ ಮೈಲಿಗಲ್ಲು ಸಿಕ್ಕಿತ್ತು. ಜೇಮ್ಸ್ ವಾಟ್ಸನ್ ಅವರ ನಿಧನದ ವಿಷಯವನ್ನು ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿ ದೃಢಪಡಿಸಿದೆ.
ವಿಜ್ಞಾನ ಲೋಕದ ಈ ದಿಗ್ಗಜ ವಿವಾದಗಳಿಂದ ದೂರ ಇರಲಿಲ್ಲ. ಕಪ್ಪು ಮತ್ತು ಬಿಳಿ ಜನರ ನಡುವೆ ಬುದ್ಧಿಮತ್ತೆ ವ್ಯತ್ಯಾಸಕ್ಕೆ ಜೀನ್ಸ್ ಕಾರಣವೆಂದು ಹೇಳಿದ್ದಕ್ಕಾಗಿ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು.
ಜೀವಿತಾವಧಿಯ ಕೊನೆಯಲ್ಲಿ ವಾಟ್ಸನ್ ಅವರು ತಮ್ಮ ನೊಬೆಲ್ ಚಿನ್ನದ ಪದಕವನ್ನೇ ಹರಾಜಿನಲ್ಲಿ ಮಾರಾಟ ಮಾಡಿದರು. ಆ ಪದಕವನ್ನು ರಷ್ಯಾದ ಕೋಟ್ಯಾಧೀಶನೊಬ್ಬ 38 ಕೋಟಿ ರೂಪಾಯಿಗಳ ಮೊತ್ತಕ್ಕೆ ಖರೀದಿಸಿ, ನಂತರ ಮಾನವೀಯತೆಗಾಗಿ ಮತ್ತೆ ವಾಟ್ಸನ್ ಅವರಿಗೆ ಹಿಂತಿರುಗಿಸಿದರು.
ಜೇಮ್ಸ್ ವಾಟ್ಸನ್ ಅವರ ಜೀವನವು ವಿಜ್ಞಾನ, ವಿವಾದ ಮತ್ತು ಮಾನವ ಮನಸ್ಸಿನ ಅನ್ವೇಷಣೆಯ ಅಸಾಧಾರಣ ಸಂಯೋಜನೆಯಾಗಿತ್ತು. ಅವರ ಆವಿಷ್ಕಾರದಿಂದ ವಿಶ್ವ ವಿಜ್ಞಾನ ಇತಿಹಾಸದಲ್ಲಿ ಶಾಶ್ವತ ಗುರುತು ಉಳಿದಿದೆ.
