Ashwaveega News 24×7 ಮೇ 04 – 2026 : ಪುದುಚೇರಿ : ಪುದುಚೇರಿ ವಿಧಾನಸಭೆ ಚುನಾವಣೆಯ ಫಲಿತಾಂಶದತ್ತ ರಾಜಕೀಯ ವಲಯದ ಕಣ್ಣು ನೆಟ್ಟಿದೆ. 30 ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಈ ಬಾರಿ ದಾಖಲೆಯ 89.87% ಮತದಾನ ದಾಖಲಾಗಿದೆ.
ರಾಜ್ಯದಲ್ಲಿ ಅಧಿಕಾರದ ಕಗ್ಗಂಟು ಎರಡು ಪ್ರಮುಖ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ಹಿಡಿಯುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ .
ಎನ್ಡಿಎ ಮೈತ್ರಿಕೂಟದಲ್ಲಿ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ (AINRC), ಬಿಜೆಪಿ (BJP) ಹಾಗೂ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷಗಳು ಸೇರಿಕೊಂಡಿವೆ. ಇನ್ನೊಂದೆಡೆ, ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷಗಳು ಮೈತ್ರಿಯಾಗಿ ಕಣಕ್ಕಿಳಿದಿವೆ .
ಈ ಬಾರಿ ಮತ್ತೊಂದು ಪ್ರಮುಖ ಅಂಶವೆಂದರೆ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವು ಎಲ್ಲಾ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದು. ಅವರ ಪ್ರವೇಶ ಚುನಾವಣೆಯಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಮತದಾರರ ಮನೋಭಾವದ ಮೇಲೆ ಪರಿಣಾಮ ಬೀರಿದೆ.
ಎಕ್ಸಿಟ್ ಪೋಲ್ಗಳ ಪ್ರಕಾರ, ಪುದುಚೇರಿಯಲ್ಲಿ ಮತ್ತೊಮ್ಮೆ ಎನ್ಡಿಎ ಸರ್ಕಾರವೇ ಅಧಿಕಾರಕ್ಕೆ ಬರಬಹುದು ಎಂಬ ಭವಿಷ್ಯವಾಣಿ ಕೇಳಿಬಂದಿದೆ. ಆದರೂ, ಅಂತಿಮ ಫಲಿತಾಂಶ ಏನಾಗಲಿದೆ ಎಂಬುದು ಮತ ಎಣಿಕೆಯ ಬಳಿಕವೇ ಸ್ಪಷ್ಟವಾಗಲಿದೆ.
ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಶೀಘ್ರದಲ್ಲೇ ಜನಾದೇಶ ಬಹಿರಂಗವಾಗಲಿದೆ. ದಳಪತಿ ವಿಜಯ್ ಈ ಚುನಾವಣೆಯಲ್ಲಿ ಕಮಾಲ್ ಮಾಡುತ್ತಾರೆಯೇ, ಅಥವಾ ಸ್ಥಾಪಿತ ಪಕ್ಷಗಳೇ ಮೇಲುಗೈ ಸಾಧಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
