Ashwaveega News 24×7 ನವೆಂಬರ್. 30: ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ಅವರು ಇಂದು (ನ.30) ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದಾಗಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಂ. ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದರು. ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ 1948ರಿಂದ ಸಕ್ರಿಯರಾಗಿದ್ದರು.
ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ, ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ರ್ಯಾಂಬೊ, ಮುಸ್ಸಂಜೆ ಮಾತು, ಡೇರ್ ಡೆವಿಲ್ ಮುಸ್ತಫಾ, ಹಗಲುವೇಷ ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
“ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ಇಂತಹ ಅಸಾಮಾನ್ಯ ರೀತಿಯ ಡೈಲಾಗ್, ಅಭಿನಯದ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿದ್ದರು.
ಮೈಸೂರು ಮೂಲದವರಾದ ಉಮೇಶ್, ಬಣ್ಣದ ಲೋಕಕ್ಕೆ ಕಾಲಿಡುವ ಮೊದಲು ರಂಗಭೂಮಿಯಲ್ಲಿ ಅಪಾರ ಅನುಭವ ಗಳಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಗುಬ್ಬಿ ವೀರಣ್ಣ ನಾಟಕ ಕಂಪೆನಿಯಲ್ಲಿ ಬಾಲನಟನಾಗಿ ಅಭಿನಯ ಪ್ರಾರಂಭಿಸಿದ್ದರು. ಅವರ ಪ್ರತಿಭೆ ಗುರುತಿಸಿದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಿದರು.
ಇನ್ನು ಹಾಸ್ಯದಿಂದ ಹಿಡಿದು ಗಂಭೀರ ಪಾತ್ರಗಳವರೆಗೆ ವಿವಿಧ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಉಮೇಶ್ ಅವರ ಕಲಾ ಸೇವೆ ಕನ್ನಡ ಚಿತ್ರರಂಗಕ್ಕೆ ಸದಾ ಸ್ಮರಣೀಯ. ಅವರ ಅಗಲಿಕೆ ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
