Ashwaveega News 24×7 ಡಿಸೆಂಬರ್. 03: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ , ಬ್ರೇಕ್ ಫಾಸ್ಟ್ ಮೀಟಿಂಗ್ ನಡುವೆಯೇ ತೆರೆಮರೆಯಲ್ಲೇ ಕೆಲ ಚಟುವಟಿಕೆಗಳು ನಡೆಯುತ್ತಿವೆ. “ಕೈ” ಪಾಳಯದ ಅಧಿಕಾರ ಹಂಚಿಕೆ ಸಸ್ಪೆನ್ಸ್ ದಿನೇದಿನೇ ತೀವ್ರ ಕುತೂಹಲ ಮೂಡಿಸುತ್ತಿದೆ.
ಆದ್ರೂ ಹೈಕಮಾಂಡ್ ಸೂಚನೆ ಮೇರೆಗೆ ನಡೆದ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಸಿಎಂ, ಡಿಸಿಎಂ ಒಗ್ಗಟ್ಟು ಪ್ರದರ್ಶನ ಮಾಡಿ ಗೊಂದಲಗಳಿಗೆ ತೆರೆಎಳೆದಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಕುರ್ಚಿ ಕದನ ಕೊಂಚ ತಣ್ಣಗಾದಂತೆ ಕಾಣ್ತಿದೆ. ಈ ಮಧ್ಯೆಯೇ ಮಂಗಳೂರಿನ ಗುರು-ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ.
ಈ ವೇಳೆ ಸಿಎಂ ಹಾಗೂ ಕೆಸಿವಿ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಗುಸು ಗುಸು ಮಾತುಕತೆ ನಡೆಸಿರುವುದು ಎಲ್ಲರ ಗಮನ ಸೆಳೆದಿದೆ.
ಕಾರ್ಯಕ್ರಮಕ್ಕೆ ಹೋಗುವ ಮುನ್ನ ಕಾವೇರಿ ಗೆಸ್ಟ್ ಹೌಸ್ನಲ್ಲಿ ಕೆ.ಸಿ.ವೇಣುಗೋಪಾಲ್ ಅವರನ್ನ ಭೇಟಿಯಾಗಿ ಸಿಎಂ ಸಿದ್ದರಾಮಯ್ಯ 2 ಬ್ರೇಕ್ಫಾಸ್ಟ್ ಮೀಟಿಂಗ್ಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಉಭಯ ನಾಯಕರು ಕೆಲಹೊತ್ತು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು,
ಸಿಎಂ ಪಟ್ಟ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಗುರು-ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮದ ವೇದಿಕೆಗೆ ವೇಣುಗೋಪಾಲ್ ಆಗಮಿಸುತ್ತಿದ್ದಂತೆ, ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಘೋಷಣೆ ಕೂಗಿದ್ದಾರೆ. ಡಿಕೆಶಿ ಆಪ್ತ ಮಿಥುನ್ ರೈ ನೇತೃತ್ವದಲ್ಲಿ ಬಂದಿದ್ದ ಬೆಂಬಲಿಗರು, ಕೆ.ಸಿ. ವೇಣುಗೋಪಾಲ್ ಮುಂದೆ
ಡಿಕೆ.. ಡಿಕೆ.. ಎಂದು ಘೋಷಣೆ ಕೂಗಿ ಶಕ್ತಿಪ್ರದರ್ಶನ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶೀ, ಮಂಗಳೂರಲ್ಲಿ ನನ್ನ ಪರ ಘೋಷಣೆ ಕೂಗಿದ್ರಲ್ಲಿ ತಪ್ಪೇನಿಲ್ಲ. ಡಿಕೆ.. ಡಿಕೆ ಘೋಷಣೆ ಕಳೆದ 10 ವರ್ಷಗಳಿಂದ ನಡೀತಿದೆ. ಜನ ಮೋದಿ.. ಮೋದಿ ಅಂತಾರೆ, ಹಾಗೇ ಡಿಕೆ.. ಡಿಕೆ ಅಂತಾರೆ.
ಕೆಲವರು ರಾಹುಲ್ ಅಂತಾರೆ, ಮತ್ತೆ ಕೆಲವರು ಸಿದ್ದು ಅಂತಾರೆ. ಇದರಲ್ಲಿ ತಪ್ಪೇನಿದೆ..? ಇದನ್ನ ಸ್ವಾಗತ ಮಾಡಬೇಕು ಎಂದು ಹೇಳಿದ್ರು..
ಇನ್ನೂ ಇದಕ್ಕೆ ತಿರುಗೇಟು ನೀಡಿದ ಸಿಎಂ ಬೆಂಬಲಿಗರು, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಘೋಷಣೆ ಕೂಗಿದರು. ಕರಾವಳಿಯಲ್ಲಿ ಕೆಲಹೊತ್ತು ಸಿಎಂ V/s ಡಿಸಿಎಂ ಆಪ್ತರ ಘೋಷಣೆಯ ಹಂಗಾಮಾವೇ ನಡೆಯಿತು. ಸಿಎಂ & ಡಿಸಿಎಂ ಬೆಂಬಲಿಗರ ಕಂಡು ಒಂದು ಕ್ಷಣ ಕೆ.ಸಿ.ವೇಣುಗೋಪಾಲ್ ತಬ್ಬಿಬ್ಬಾದ್ರು.
ಒಂದು ಕಡೆ ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ
ತೆರಳಿದ್ದಾರೆ. ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉದ್ದೇಶದಿಂದ ಡಿಕೆಶಿ ತೆರಳುತ್ತಿದ್ದು, ಆದ್ರೆ ಹೈಕಮಾಂಡ್ ನಾಯಕರನ್ನ ಭೇಟಿಯಾಗುವ ಸಾಧ್ಯತೆಗಳಿವೆ.
