Ashwaveega News 24×7 ಜನವರಿ 12 – ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 30 ರೊಳಗೆ ಜಿಬಿಎ ವ್ಯಾಪ್ತಿಯಲ್ಲಿರುವ 5 ಪಾಲಿಕೆಗಳಿಗೆ ಚುನಾವಣೆ (Election) ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ಪ್ರಕಟಿಸಿದೆ .
ಜನವರಿ 12ರಂದು ಸೋಮವಾರ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಪೀಠವು ಈ ಕುರಿತು ವಿಚಾರಣೆ ನಡೆಸಿದ್ದು, ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮಹತ್ವದ ನಿರ್ದೇಶನಗಳನ್ನು ನೀಡಿದೆ .
ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಡಿಯಲ್ಲಿ ರಚನೆಯಾಗಲಿರುವ ಐದು ಮಹಾನಗರ ಪಾಲಿಕೆಗಳ ವಾರ್ಡ್ಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅದರ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2026ರ ಫೆಬ್ರವರಿ 20ರವರೆಗೆ ಕಾಲಾವಕಾಶ ನೀಡಿದೆ. ವಾರ್ಡ್ ಮರುವಿಂಗಡಣೆಗೆ ಫೆಬ್ರವರಿ 20ರ ಗಡುವು ಮಾಡಿಕೊಡಲಾಗಿದೆ …
ಚುನಾವಣಾ ಆಯೋಗದ ಪರ ವಕೀಲರು, ಮಾರ್ಚ್ 16ರ ವೇಳೆಗೆ ಮತದಾರರ ಪರಿಶೀಲನೆ ಅಂತ್ಯವಾಗಲಿದೆ. ಬಳಿಕ SSLC ಪರೀಕ್ಷೆ ನಡೆಯಲಿದೆ. ಹೀಗಾಗಿ ಮೇ ಕೊನೆ ವಾರದವರೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು .
ಈ ಸಂದರ್ಭದಲ್ಲಿ ಅಂತಿಮವಾಗಿ ಚುನಾವಣಾ ಪ್ರಕ್ರಿಯೆ ಮುಗಿಸಲು ಎಷ್ಟು ಸಮಯ ಬೇಕು ಎಂದು ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಜೂನ್ವರೆಗೂ ಸಮಯ ಬೇಕಾಗಬಹುದು ಎಂದು ಆಯೋಗ ಉತ್ತರಿಸಿತು. ಅಂತಿಮವಾಗಿ ಸುಪ್ರೀಂಕೋರ್ಟ್ ಜೂನ್ 30 ರೊಳಗೆ GBA ಚುನಾವಣೆ ನಡೆಸಲು ನಿರ್ದೇಶನ ನೀಡಿತು. ಇದರ ಜೊತೆ ರಾಜ್ಯ ಸರ್ಕಾರಕ್ಕೆ ಮತ್ತೆ ಸಮಯ ಕೇಳದಂತೆ ಎಚ್ಚರಿಕೆ ನೀಡಿತು .
ಮಕ್ಕಳ ಶಾಲಾ ಪರೀಕ್ಷೆಗಳು ಮುಗಿದ ನಂತರವೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅದರಂತೆ, 2026ರ ಮೇ 26 ರಿಂದ ಚುನಾವಣಾ ಪ್ರಕ್ರಿಯೆಗಳು ಅಧಿಕೃತವಾಗಿ ಆರಂಭವಾಗಲಿವೆ.
ಯಾವುದೇ ಕಾರಣಕ್ಕೂ ಚುನಾವಣಾ ಪ್ರಕ್ರಿಯೆ ತಡವಾಗಬಾರದು ಎಂದು ಎಚ್ಚರಿಸಿರುವ ಸುಪ್ರೀಂ ಕೋರ್ಟ್, ಎಲ್ಲಾ ಹಂತದ ಚುನಾವಣಾ ಪ್ರಕ್ರಿಯೆಗಳು 2026 ರ ಜೂನ್ 30ರೊಳಗೆ ಮುಕ್ತಾಯಗೊಳ್ಳಲೇಬೇಕು ಎಂದು ಖಡಕ್ ಆದೇಶ ನೀಡಿದೆ …
