Ashwaveega News 24×7 ಜನವರಿ 12 – ಗದಗ – ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವಾಗ ಚಿನ್ನದ ನಿಧಿ ಸಿಕ್ಕಿತ್ತು. ಪ್ರಾಮಾಣಿಕವಾಗಿ ನಿಧಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದರೂ, ಆ ಕುಟುಂಬ ಈಗ ಬೀದಿಗೆ ಬಿದ್ದಿದೆ. ನಿಧಿ ಸಿಕ್ಕ ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದೆ. ಇದರಿಂದ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು , ಅಲ್ಲಿ ಮನೆ ವಾಸಿಸಲು ಸಾಧ್ಯವಾಗದೆ, ತಾಯಿ ಮತ್ತು ಚಿಕ್ಕ ಮಗನಿದ್ದ ಬಡ ಕುಟುಂಬಕ್ಕೆ ಆಶ್ರಯವಿಲ್ಲದಂತಾಗಿದೆ. ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದ್ದು, ಎಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿದೆ. ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಈ ಬಡ ಕುಟುಂಬಕ್ಕೆ ಈಗ ಆಸರೆ ಇಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಯ ಸದಸ್ಯರು ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಕುಟುಂಬಕ್ಕೆ ಒಂದು ನಿವೇಶನ ಅಥವಾ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುಟುಂಬದವರು ಚಿನ್ನದ ಆಸೆಯನ್ನು ಬಿಟ್ಟು, ನಮಗೆ ಮನೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. “ನಮ್ಮ ಅಣ್ಣನ ಮನೆ ಅಥವಾ ಸಣ್ಣ ಮಾವನ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದೇವೆ. ಚಿನ್ನದ ನಿಧಿ ನಮಗೆ ಬೇಡ, ಸರ್ಕಾರ ನಮಗೆ ಬದುಕಲು ಒಂದು ಮನೆ ನೀಡಿದರೆ ಸಾಕು. ಮಗನಿಗೆ ಶಿಕ್ಷಣ ಕೊಡಿಸಿ, ಅವನ ಭವಿಷ್ಯ ರೂಪಿಸಲು ಸಹಾಯ ಮಾಡಿ” ಎಂದು ಬೇಡಿಕೊಂಡಿದ್ದಾರೆ. ನಿಧಿ ಸಿಕ್ಕಾಗ ನಾವು ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಊಹಿಸಿರಲಿಲ್ಲ, ಹೊಲ ಮಾರಿ ಮನೆ ಕಟ್ಟಲು ಆರಂಭಿಸಿದ್ದೇವೆ.. ಚಿನ್ನ ದೊರೆತಿದ್ದರೂ, ಅದು ಇವರಿಗೆ ನೆಮ್ಮದಿ ನೀಡುವ ಬದಲು ಕಷ್ಟ ತಂದಿದೆ. ಹೀಗಾಗಿ, ಸರ್ಕಾರವು ಕೂಡಲೇ ಸ್ಪಂದಿಸಿ ಆ ಕುಟುಂಬಕ್ಕೆ ಸೂಕ್ತ ನೆರವು ನೀಡಬೇಕೆಂದು ಇಡೀ ಲಕ್ಕುಂಡಿ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
