
Bengaluru-Mangaluru highway hit by landslide Shiradi Ghat closed
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಯ ಪರಿಣಾಮ ಕರಾವಳಿ, ಮಲೆನಾಡು, ಕೊಡಗು, ಹಾಸನ ಜಿಲ್ಲೆಗಳಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವುಂಟಾಗಿದ್ದು, ಜನಜೀವನಕ್ಕೆ ಸಮಸ್ಯೆಯಾಗಿದೆ. ಹಲವು ಕಡೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಮಾರನಹಳ್ಳಿ ಬಳಿ ಭೂ ಕುಸಿತ ಸಂಭವಿಸಿದ ಕಾರಣ ಶಿರಾಡಿ ಘಾಟ್ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಬೆಂಗಳೂರು ಹಾಗೂ ಮಂಗಳೂರು ನಡುವೆ ಪ್ರಯಾಣಕ್ಕೆ ಬದಲಿ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ.
ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ಗುಡ್ಡ ಕುಸಿದ ಕಾರಣ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ.
ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ ಬಳಸುವಂತೆ ಸೂಚನೆ ನೀಡಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನ ಸವಾರರು ಕೊಡಗಿನ ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿ ಹಾಸನ ಡಿಸಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಇನ್ನು ಕೊಡಗಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಲಾಗಿದೆ.