Ashwaveega News 24×7 ಸೆ. 02: ಮಲಯಾಳಂನ “ಲೋಕಃ” ಸಿನಿಮಾ ವಿರುದ್ಧ ಕನ್ನಡಿಗರು ಕೆಂಡವಾಗಿದ್ದಾರೆ. ಬೆಂಗಳೂರಿನ ಹುಡುಗಿಯರ ಚಾರಿತ್ರ್ಯವಧೆ ಮಾಡುವ ಮೂಲಕ ಲೋಕಃ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಖ್ಯಾತ ನಟ ದುಲ್ಕರ್ ನಿರ್ಮಾಣದ ಮಲಯಾಳಂ ಭಾಷೆಯ ಲೋಕಃ ಚಾಪ್ಟರ್-1 ಸಿನಿಮಾದಲ್ಲಿ ಬೆಂಗಳೂರಿನ ಯುವತಿಯರ ಬಗ್ಗೆ ಕೀಳುಮಟ್ಟದ ಡೈಲಾಗ್ಗೆ ಬಳಸಿದ್ದು ಕನ್ನಡಿಗರನ್ನು ಕೆರಳಿಸಿದೆ. ಹೀಗಾಗಿ ಚಿತ್ರದಲ್ಲಿನ ಕೆಲ ಡೈಲಾಗ್ಗಳಿಗೆ ಕತ್ತರಿ ಹಾಕುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಕನ್ನಡ ಪರಹೋರಾಟಗಾರ ರೂಪೇಶ್ ರಾಜಣ್ಣ ಸಹ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಂಗಳೂರನ್ನು ಮಾದಕ ದ್ರವ್ಯ ರಾಜಧಾನಿ ರೀತಿ ಚಿತ್ರೀಕರಣ ಮಾಡಲಾಗುತ್ತಿದೆ ಅಂತಾ ಸ್ಯಾಂಡಲ್ವುಡ್ ನಿರ್ದೇಶಕ ಮಂಸೋರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದ “ಭೀಮ”, ಮಲಯಾಳಂನ “ಆಫೀಸರ್ ಆನ್ ಡ್ಯೂಟಿ”, “ಆವೇಶಮ್” & “ಲೋಕಃ”ನ ಚಿತ್ರಗಳಲ್ಲಿ ಬೆಂಗಳೂರಿನಲ್ಲಿ ಡ್ರಗ್ ಸಿಟಿಯಾಗಿ ತೋರಿಸಲಾಗಿದೆ. ಒಂದು ಕಾಲದಲ್ಲಿ ಬೆಂಗಳೂರು ಸುಂದರವಾದ ಪಟ್ಟಣವಾಗಿದ್ದ ನಮ್ಮ ಬೆಂಗಳೂರು, ಅನಿಯಂತ್ರಿತ ವಲಸೆಯಿಂದಾಗಿ ಇಂತಹ ಸ್ಥಿತಿಗೆ ತಲುಪಿದೆ ಎಂದು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಪ್ರತಿಕ್ರಿಯಿಸಿದ್ದು, ಅಂತಹ ಸಂದೇಶ ಇದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಸಿಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಕಲೆ ಹಾಕಲು ಹೇಳ್ತೇನೆಅವಹೇಳನಕಾರಿ ಹೇಳಿಕೆ ಇದ್ದರೆ ಖಂಡಿತ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಇನ್ನು ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ ಇಷ್ಟೆಲ್ಲಾ ಆಕ್ರೋಶದ ಬಳಿಕ ಲೋಕಃ ಚಿತ್ರತಂಡ ಕನ್ನಡಿಗರ ಕ್ಷಮೆಯಾಚಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಚಿತ್ರ ನಿರ್ಮಾಣ ಸಂಸ್ಥೆ “ನಮ್ಮ ಕಣ್ತಪ್ಪಿನಿಂದಾಗಿರುವ ಈ ಪ್ರಮಾದಕ್ಕೆ ನಾವು ಬೇಷರತ್ ಕ್ಷಮೆ ಕೋರುತ್ತೇವೆ.ಈ ಕೂಡಲೇ ಆ ನಿರ್ದಿಷ್ಟ ಸಂಭಾಷಣೆಯನ್ನು ತೆಗೆದು ಬದಲಾಯಿಸುತ್ತೇವೆ” ಎಂದಿದ್ದಾರೆ.
