Ashwaveega News 24×7 ಅ. 22: ಈ ಬಾರಿ ಮೈಸೂರು ದಸರಾ ಮಹೋತ್ಸವವನ್ನು ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತರನ್ನು ಆಹ್ವಾನಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ‘ಹೃದಯ ದೀಪ’ ಎಂಬ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದು ಕರ್ನಾಟಕಕ್ಕೆ ಬಹಳ ಹೆಮ್ಮೆಯ ವಿಷಯವಾಗಿದೆ.
ಬಾನು ಮುಷ್ತಾಕ್ ಅವರು ರೈತ ಮತ್ತು ಕನ್ನಡ ಚಳವಳಿಗಳ ಹಿನ್ನೆಲೆಯಿಂದ ಬಂದವರಾಗಿದ್ದು, ಅವರ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಸಿಎಂ ವಿವರಿಸಿದರು. ದಸರಾ ಉದ್ಘಾಟನೆಗೆ ಒಬ್ಬ ಮಹಿಳಾ ಸಾಧಕಿಯನ್ನು ಆಹ್ವಾನಿಸಿರುವುದು ರಾಜ್ಯಕ್ಕೆ ಒಂದು ಗೌರವವಾಗಿದೆ ಎಂದು ಹೇಳಿದರು.
ಈ ಬಾರಿ ದಸರಾ ಮಹೋತ್ಸವವು ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್ 22ರಂದು ಆರಂಭಗೊಂಡು ಅಕ್ಟೋಬರ್ 2ರ ವಿಜಯ ದಶಮಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಬಾನು ಮುಷ್ತಾಕ್ ಅವರಿಗೆ ಗೌರವಪೂರ್ವಕವಾಗಿ ಜಿಲ್ಲಾಡಳಿತದ ವತಿಯಿಂದ ಔಪಚಾರಿಕ ಆಹ್ವಾನ ನೀಡಲಾಗುವುದು. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಏರ್ ಶೋ ನಡೆಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಅನುಮತಿ ಪಡೆಯಲಾಗಿದೆ.
