Ashwaveega News 24×7 ಅಕ್ಟೋಬರ್. 27: ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿಗೆ ಡೀಪ್ಫೇಕ್ ಕಾಟ ಶುರುವಾಗಿದೆ. ಚಿರಂಜೀವಿ ಹೆಸರು ಹಾಗೂ ಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಲಾದ ಅಶ್ಲೀಲ ವೀಡಿಯೊಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಹಲವು ವೆಬ್ಸೈಟ್ಗಳ ವಿರುದ್ಧ ಹಿರಿಯ ನಟ ದೂರು ದಾಖಲಿಸಿದ್ದಾರೆ.
ಹಲವು ವೆಬ್ಸೈಟ್ಗಳು `ನನ್ನ ಹೆಸರು, ಹೋಲಿಕೆ ಮತ್ತು ಚಿತ್ರವನ್ನು ಬಳಸಿಕೊಂಡು ಎಐ ನಿರ್ಮಿತ ಮಾರ್ಫಿಂಗ್ ಮಾಡಿರುವ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡಿ, ನನ್ನನ್ನು ಅಶ್ಲೀಲ ಕೃತ್ಯಗಳಲ್ಲಿ ತಪ್ಪಾಗಿ ಚಿತ್ರಿಸಿವೆ’ ಎಂಬುದು ಚಿರಂಜೀವಿ ದೂರಿನ ಅಂಶ. ದೂರಿನ ಮೇರೆಗೆ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಸೆಕ್ಷನ್ 67 ಮತ್ತು 67ಂ, ಭಾರತೀಯ ನ್ಯಾಯ ಸಂಹಿತೆ 79, 294, 296 ಮತ್ತು 336(4), ಮತ್ತು 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
`ಈ ಕೃತಕ ವೀಡಿಯೋಗಳು ಸಾರ್ವಜನಿಕವಾಗಿ ತಮ್ಮ ಮೇಲೆ ತಪ್ಪು ಗ್ರಹಿಕೆ ಮೂಡಲು ಕಾರಣವಾಗಿದೆ. ನನ್ನ ಮೇಲಿರುವ ಸದ್ಭಾವನೆಯನ್ನು ವಿರೂಪಗಳಿಸುವ ದುರುದ್ದೇಶಪೂರಿತವಾಗಿ ಈ ರೀತಿ ಮಾಡಲಾಗಿದೆ’ ಎಂದಿದ್ದಾರೆ ಚಿರಂಜೀವಿ.
ಜೊತೆಗೆ ಈ ವೀಡಿಯೊಗಳು ಸಂಪೂರ್ಣವಾಗಿ ನಕಲಿಯಾಗಿದ್ದು, ಕೃತಕ ಬುದ್ಧಿಮತ್ತೆ ಅಥವಾಡೀಪ್ಫೇಕ್ ಅಶ್ಲೀಲತೆ’ ಬಳಸಿ ರಚಿಸಲಾಗಿದೆ. ನನ್ನ ಮುಖಭಾವ ಮತ್ತು ವ್ಯಕ್ತಿತ್ವವನ್ನು ಕಾನೂನುಬಾಹಿರವಾಗಿ ಅಶ್ಲೀಲ ವಿಷಯವಾಗಿ ಪರಿವರ್ತಿಸಲಾಗಿದೆ’ ಎಂದು ದೂರಿನಲ್ಲಿ ಚಿರಂಜೀವಿ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಹೈದರಾಬಾದ್ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
