Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ನಟ ದರ್ಶನ್ ವಿರುದ್ಧ ದಾಖಲಾಗಿರುವ ಡಿ ಗ್ಯಾಂಗ್ ಸಂಬಂಧಿತ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಪೊಲೀಸರು ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೊಬೈಲ್ಗಳನ್ನು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ವಶಕ್ಕೆ ಪಡೆದು ಸೀಜ್ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆರೋಪಿಗಳು ನಿಂತಿರುವ ಫೋಟೋ ಮತ್ತು ಠಾಣೆಯ ಒಳಾಂಗಣದ ಫ್ಲೋರಿಂಗ್ ನಡುವಿನ ವ್ಯತ್ಯಾಸ ಇದೀಗ ಪ್ರಶ್ನೆ ಹುಟ್ಟಿಸಿದೆ.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಮೋಸಾಕ್ ಟೈಲ್ಸ್ ಅಳವಡಿಸಲಾಗಿದೆ. ಆದರೆ ಆರೋಪಿಗಳಿರುವ ಫೋಟೋದಲ್ಲಿ ವೆಟ್ರಿಫೈಡ್ ಟೈಲ್ಸ್ ಕಾಣಿಸುತ್ತಿವೆ. ಇದರಿಂದ ಮೊಬೈಲ್ಗಳನ್ನು ಬೇರೆಡೆ ವಶಕ್ಕೆ ಪಡೆದು ಠಾಣೆಯಲ್ಲಿ ಸೀಜ್ ಮಾಡಿದಂತೆ ತೋರಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಠಾಣೆಯಲ್ಲೇ ಮೊಬೈಲ್ ವಶಕ್ಕೆ ಪಡೆಯಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆ ಅಂದಿನ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಅವರನ್ನು ಆರೋಪಿಯಾಗಿಸಲು ಮನವಿ ಸಲ್ಲಿಸಲಾಗಿದೆ. ಸಾಕ್ಷಿ ನಾಶ ಹಾಗೂ ಸುಳ್ಳು ಸಾಕ್ಷ್ಯ ಸೃಷ್ಟಿ ಆರೋಪದಡಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಆರೋಪಿ ಪವನ್ ಪರ ವಕೀಲ ಸುಧನ್ವ ಅವರು ಈ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
A-3 ಪುಟ್ಟಸ್ವಾಮಿ, A-5 ನಂದೀಶ್, A-10 ವಿನಯ್, A-11 ನಾಗರಾಜ್, A-12 ಲಕ್ಷ್ಮಣ್, A-13 ದೀಪಕ್ ಹಾಗೂ A-14 ಪ್ರದೂಷ್ ಸೇರಿದಂತೆ ಹಲವರ ಪರವಾಗಿ ಈ ಅರ್ಜಿ ಸಲ್ಲಿಕೆಯಾಗಿದೆ.
ಇಂದು ಸೆಷನ್ಸ್ ಕೋರ್ಟ್ನಲ್ಲಿ ರಿಟ್ ಅರ್ಜಿ ಸಂಬಂಧ ವಿಚಾರಣೆ ನಡೆಯಿತು. ಕಾಮಾಕ್ಷಿಪಾಳ್ಯ ಠಾಣೆಯ ಸಿಸಿಟಿವಿ ದೃಶ್ಯಗಳನ್ನು ನಾಶಪಡಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಮುಂದಿನ ಆದೇಶದವರೆಗೆ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಸುರಕ್ಷಿತವಾಗಿ ಇಡಲು ಸೂಚನೆ ನೀಡಲಾಗಿದೆ.
ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಯಾಗಿದೆವೇ ಅಥವಾ ಪೊಲೀಸ್ ಕ್ರಮದಲ್ಲಿ ತಾಂತ್ರಿಕ ಎಡವಟ್ಟಾಗಿದೆವೇ ಎಂಬುದರ ಕುರಿತು ಮುಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.
