
drastic increase in indias agricultural production bananas beats the mango
ಕಳೆದ 12 ವರ್ಷಗಳಲ್ಲಿ ಭಾರತದ ಕೃಷಿ ಮತ್ತು ಸಂಬಂಧಿತ ವಲಯಗಳು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿವೆ. ಸ್ವತಃ ಕೇಂದ್ರ ಸರ್ಕಾರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವೇ ಈ ಮಾಹಿತಿಯನ್ನು ಹೊರಹಾಕಿದೆ.
ಕೃಷಿ ವಲಯದ ಒಟ್ಟು ಮೌಲ್ಯವರ್ಧನೆ (ಜಿವಿಎ) ಕಳೆದ 12 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 2012ರಲ್ಲಿ ಸುಮಾರು 15,00,000 ಕೋಟಿ ರೂ. ಇದ್ದ ಕೃಷಿ ಜಿವಿಎ 2024ರಲ್ಲಿ 48,00,000 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.
ಭಾರತದಲ್ಲಿ ಕೈಗಾರೀಕರಣ ವೇಗವಾಗಿ ನಡೆಯುತ್ತಿದ್ದರೂ ಕೃಷಿ ಇಂದಿಗೂ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿ ಉಳಿದಿದೆ. ಇದು ಜಿಡಿಪಿಗೆ ಸುಮಾರು ಶೇ. 16ರಷ್ಟು ಕೊಡುಗೆ ನೀಡುತ್ತಿದ್ದರೆ, ಶೇ. 46ರಷ್ಟು ಜನರಿಗೆ ಇದೇ ಜೀವನಾಧಾರವಾಗಿದೆ.ಕೃಷಿ ಮತ್ತು ಸಂಬಂಧಿತ ವಲಯಗಳ ಒಟ್ಟು ಮೌಲ್ಯವರ್ಧನೆ (ಜಿವಿಎ) ಸುಮಾರು ಶೇ. 225ರಷ್ಟು ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.

2011-12ರಲ್ಲಿ ಇದು 1,502 ಸಾವಿರ ಕೋಟಿ ರೂ. ಇದ್ದರೆ, 2023-24 ರಲ್ಲಿ 4,878 ಸಾವಿರ ಕೋಟಿ ರೂ.ಗೆ ತಲುಪಿದೆ.ಕೃಷಿ ಉತ್ಪಾದನೆ ಅಥವಾ ಜಿವಿಒ ಕೂಡ ಶೇ. 55ರಷ್ಟು ಏರಿಕೆ ಕಂಡಿದ್ದು 2011-12 ರಲ್ಲಿ ಇದ್ದ 1,908 ಸಾವಿರ ಕೋಟಿ ರೂ.ನಿಂದ 2023-24ರಲ್ಲಿ ಇದು 2,949 ಸಾವಿರ ಕೋಟಿ ರೂ.ಗೆ ಮುಟ್ಟಿದೆ.ಉತ್ತಮ ಮುಂಗಾರು, ನೀರಾವರಿ ಸೌಲಭ್ಯ, ಪಿಎಂ ಕಿಸಾನ್ನಂತಹ ಸರ್ಕಾರಿ ಯೋಜನೆಗಳು ರೈತರ ಉತ್ಪಾದನೆಗೆ ಹೆಚ್ಚಿನ ರೀತಿಯಲ್ಲಿ ನೆರವಾಗಿವೆ. ಇದು ರೈತರ ಆದಾಯ ಹೆಚ್ಚಲೂ ಪ್ರಮುಖ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.
ಬೆಳೆ ಉತ್ಪಾದನೆಯು ಕೃಷಿ ಜಿಒವಿಯಲ್ಲಿ ದೊಡ್ಡ ಪಾಲು ಹೊಂದಿದ್ದು, ಶೇ. 54ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಅರ್ಧಕ್ಕಿಂತ ಹೆಚ್ಚಿವೆ. ಭತ್ತ ಮತ್ತು ಗೋಧಿ ಧಾನ್ಯ ವಿಭಾಗದಲ್ಲಿ ಶೇ. 85ರಷ್ಟು ಕೊಡುಗೆ ನೀಡುತ್ತಿವೆ.
ಇಲ್ಲಿಯವರೆಗೆ ಒಟ್ಟಾರೆ ಹಣ್ಣುಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಮಾವನ್ನು ಬಾಳೆಹಣ್ಣು ಹಿಂದಿಕ್ಕಿದೆ. ಬಾಳೆಹಣ್ಣಿನ ಜಿವಿಒ 47 ಸಾವಿರ ಕೋಟಿ ರೂ. ಆಗಿದ್ದರೆ, ಮಾವಿನಹಣ್ಣಿನ ಜಿವಿಒ 46.1 ಸಾವಿರ ಕೋಟಿ ರೂ. ಇದೆ.
ಕೃಷಿ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದು ರಾಷ್ಟ್ರೀಯ ಜಿವಿಒಗೆ ಶೇ. 17ರಷ್ಟು ಕೊಡುಗೆ ನೀಡುತ್ತಿದ್ದು, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ಮತ್ತು ಹರಿಯಾಣ ನಂತರದ ಸ್ಥಾನಗಳಲ್ಲಿವೆ. ಶೇ. 53ರಷ್ಟು ಉತ್ಫಾದನೆ ಈ ರಾಜ್ಯಗಳಲ್ಲೇ ನಡೆಯುತ್ತಿದೆ.