Ashwaveega News 24×7 ಮಾರ್ಚ್ 01 – 2026 : ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ವಾತಾವರಣ ತಾರಕ್ಕೇರಿದ್ದು, ದುಬೈ ಹಾಗೂ ಕತಾರ್ನ ದೋಹಾದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆದಿರುವ ವರದಿಗಳು ಹರಿದಾಡುತ್ತಿವೆ. ಕೆಲವು ಮೂಲಗಳ ಪ್ರಕಾರ, ದುಬೈ ಏರ್ಪೋರ್ಟ್ ಭಾಗವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆದಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇನ್ನೂ ಕೆಲವು ವರದಿಗಳು ದುಬೈ ಮೇಲೆ 150ಕ್ಕೂ ಹೆಚ್ಚು ಮಿಸೈಲ್ಗಳು ಉಡಾಯಿಸಲ್ಪಟ್ಟಿವೆ ಎಂದು ಹೇಳುತ್ತಿದ್ದರೂ, ಈ ಅಂಕಿ-ಅಂಶಗಳ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ದಾಳಿಯಿಂದ ಕೆಲವು ಕಟ್ಟಡಗಳಿಗೆ ಹಾನಿಯಾಗಿರುವ ಮಾಹಿತಿ ಮಾತ್ರ ಹೊರಬಂದಿದೆ.
ಕತಾರ್ನ ರಾಜಧಾನಿ ದೋಹಾದಲ್ಲಿಯೂ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜನರು ಭಯಭೀತರಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದೇ ವೇಳೆ, ಇರಾನ್ ಅಮೆರಿಕ ಹಾಗೂ ಇಸ್ರೇಲ್ ವಾಯುನೆಲೆಗಳನ್ನೂ ಗುರಿಯಾಗಿಸಿದೆ ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಮಧ್ಯಪ್ರಾಚ್ಯದ 6 ದೇಶಗಳಲ್ಲಿ ಇರುವ 27 ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂಬ ದಾವೆಗಳು ಕೂಡ ಪ್ರಸಾರವಾಗುತ್ತಿವೆ. ಕತಾರ್, ಕುವೈತ್, ಬಹರೈನ್, ಯುಎಇ (ದುಬೈ), ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳಲ್ಲಿರುವ ಯುಎಸ್ ನೆಲೆಗಳು ಗುರಿಯಾಗಿದ್ದವು .
ಆದರೆ, ಈ ದಾಳಿಗಳ ಪ್ರಮಾಣ ಮತ್ತು ಪರಿಣಾಮಗಳ ಬಗ್ಗೆ ಸಂಬಂಧಿತ ರಾಷ್ಟ್ರಗಳಿಂದ ಅಧಿಕೃತ ಸ್ಪಷ್ಟನೆ ಇನ್ನೂ ನಿರೀಕ್ಷೆಯಲ್ಲಿದೆ. ಭದ್ರತಾ ಕಾರಣಗಳಿಂದ ಹಲವೆಡೆ ಏರ್ಸ್ಪೇಸ್ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
ದುಬೈ ಏರ್ಪೋರ್ಟ್ ಪ್ರದೇಶದಲ್ಲಿ ಪ್ರಯಾಣಿಕರು ಆತಂಕದಲ್ಲಿದ್ದು, ಕೆಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳೀಯ ಆಡಳಿತ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಯಾವುದೇ ವದಂತಿಗಳನ್ನು ನಂಬಬಾರದು ಎಂದು ಸೂಚಿಸಿದೆ.
ಒಟ್ಟಾರೆ, ಮಧ್ಯಪ್ರಾಚ್ಯದ ಪರಿಸ್ಥಿತಿ ಗಂಭೀರ ತಿರುವು ಪಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಜಾಗತಿಕ ಸಮುದಾಯದ ಕಣ್ಣುಗಳು ಈಗ ಈ ಪ್ರದೇಶದತ್ತ ನೆಟ್ಟಿವೆ.
