Ashwaveega News 24×7 ಜನವರಿ 23 – ಮೈಸೂರು: ಮುಡಾ (MUDA) ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎಂದು ಹೇಳಲಾಗುತ್ತಿರುವ ಮರಿಗೌಡಗೆ ಜಾರಿ ನಿರ್ದೇಶನಾಲಯ (ED) ಭಾರೀ ಶಾಕ್ ನೀಡಿದೆ. ಮರಿಗೌಡಗೆ ಸೇರಿದ್ದ ಸುಮಾರು ₹20 ಕೋಟಿ ಮೌಲ್ಯದ 10 ಆಸ್ತಿಗಳನ್ನು ED ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ದಾಖಲಾಗಿದ್ದ ಎಫ್ಐಆರ್ ಆಧರಿಸಿ ತನಿಖೆ ನಡೆಸಿದ ED, ಅಕ್ರಮವಾಗಿ ಹಂಚಿಕೆಯಾದ 6 ಮುಡಾ ಸೈಟ್ಗಳನ್ನು ವಶಕ್ಕೆ ಪಡೆದುಕೊಂಡಿದೆ. ಜೊತೆಗೆ 3 ಸ್ಥಿರಾಸ್ತಿಗಳು ಹಾಗೂ 1 ವಾಣಿಜ್ಯ ಕಟ್ಟಡವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ತನಿಖೆಯಲ್ಲಿ ಮುಡಾ ಹಗರಣದಲ್ಲಿ ಮುಡಾ ಅಧಿಕಾರಿಗಳೂ ಭಾಗಿಯಾಗಿರುವ ಗಂಭೀರ ಆರೋಪಗಳು ಕೇಳಿಬಂದಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಅಧಿಕಾರಿಗಳ ನಡುವಿನ ನಂಟು ಬಹಿರಂಗವಾಗಿದೆ. ಸೈಟ್ ಹಂಚಿಕೆಗೆ ನಗದು ರೂಪದಲ್ಲಿ ಲಂಚ ಪಾವತಿ ನಡೆದಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ED ಮೂಲಗಳು ತಿಳಿಸಿವೆ.
ಈಗಾಗಲೇ ಮುಡಾ ಕೇಸಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು ₹460 ಕೋಟಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ. ಹಣದ ಅಕ್ರಮ ವಹಿವಾಟು, ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದ ಹಲವು ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ.
ಮುಡಾ ಹಗರಣ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೆಸರುಗಳು ತನಿಖೆಯ ಅಂಗಳಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
