Ashwaveega News 24×7 ಜನವರಿ 16 – ಬೆಂಗಳೂರು : ಕರ್ನಾಟಕ ಮೂಲದ ರಿವರ್ ಮೊಬಿಲಿಟಿ ಕಂಪನಿ ತಯಾರಿಸಿರುವ Yamaha EC-06 ವಿದ್ಯುತ್ ಚಾಲಿತ ಬೈಕ್ ಅನ್ನು ಜಾಗತಿಕ ಖ್ಯಾತಿಯ Yamaha ಕಂಪನಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಬೆಂಗಳೂರಿನ ತಯಾರಿಕಾ ಘಟಕದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಗರ ಸಂಚಾರವನ್ನು ಪರಿಸರ ಸ್ನೇಹಿ, ಸುಗಮ ಮತ್ತು ಸುಸ್ಥಿರಗೊಳಿಸುವ ಇಂತಹ ವಿದ್ಯುತ್ ದ್ವಿಚಕ್ರ ವಾಹನಗಳ ಸ್ಥಳೀಯ ಉತ್ಪಾದನೆ ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಒಂದು ಉಜ್ವಲ ಅಧ್ಯಾಯವಾಗಿದ್ದು, ಭವಿಷ್ಯದ ಸಂಚಾರ ವ್ಯವಸ್ಥೆಯ ನಿರ್ಮಾಣ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಅವರು ಕಾರ್ಖಾನೆಯ ತಯಾರಿಕಾ ವ್ಯವಸ್ಥೆ ಮತ್ತು ಇತರ ಸೌಲಭ್ಯಗಳನ್ನು ವೀಕ್ಷಿಸಿದರು.
ಈ ಘಟಕದಲ್ಲಿ ವರ್ಷಕ್ಕೆ ಸುಮಾರು 2,000 ಉನ್ನತ ಗುಣಮಟ್ಟದ ವಿದ್ಯುತ್ ಬೈಕ್ಗಳನ್ನು ತಯಾರಿಸುವ ಗುರಿಯಿದೆ. ಇವುಗಳಿಗೆ ಸ್ಥಳೀಯವಾಗಿ ತಯಾರಿಸಲಾದ ಬ್ಯಾಟರಿಗಳನ್ನು ಅಳವಡಿಸಲಾಗುತ್ತಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 1 ಲಕ್ಷ ಕಿಲೋಮೀಟರ್ವರೆಗೆ ವಾಹನ ಚಾಲನೆ ಸಾಧ್ಯವಾಗುತ್ತದೆ. ಬ್ಯಾಟರಿಗೆ 10 ವರ್ಷಗಳ ವಾರಂಟಿಯೂ ಇರುತ್ತದೆ ಎಂದು ತಿಳಿಸಿದರು.

ಸ್ಥಳೀಯ ಉತ್ಪಾದನೆಯಿಂದ ಆರ್ಥಿಕ ಮೌಲ್ಯ ಸೃಷ್ಟಿಯಾಗುವುದರ ಜೊತೆಗೆ, ಕೌಶಲ್ಯಪೂರ್ಣ ಉದ್ಯೋಗಗಳು, ಪೂರೈಕೆ ಸರಪಳಿ ಬಲವರ್ಧನೆ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೊಸ ಅವಕಾಶಗಳು ಲಭಿಸಲಿವೆ. ವಾಹನ ಮಾರುಕಟ್ಟೆ ವೇಗವಾಗಿ ವಿದ್ಯುತ್ ವಾಹನಗಳತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಈಗಾಗಲೇ ಸಾವಿರಾರು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಸಚಿವರು ಹೇಳಿದರು. ಇದು EV ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಯಮಹಾ ಇಂಡಿಯಾ ಅಧ್ಯಕ್ಷ ಜಿಮ್ ಅಯೋಟಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ರಿವರ್ ಮೊಬಿಲಿಟಿ ಸಿಇಒ ಅರವಿಂದ ಮಣಿ, ಸಹ-ಸಂಸ್ಥಾಪಕ ವಿಪಿನ್ ಜಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
