Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ರಾಜ್ಯ ರಾಜಕೀಯದಲ್ಲಿ “ಪವರ್ ಶೇರಿಂಗ್” ಚರ್ಚೆ ತೀವ್ರಗೊಳ್ಳುತ್ತಿರುವ ನಡುವೆಯೇ , ಕೆಲ ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿರುವ ವಿಚಾರಕ್ಕೆ ಗೃಹ ಸಚಿವ G. Parameshwara ಕಿಡಿಕಾರಿದ್ದಾರೆ. ಸಾರ್ವಜನಿಕವಾಗಿ ಈ ವಿಷಯವನ್ನು ಚರ್ಚಿಸುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು .
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಏನಾದರೂ ತಪ್ಪು ಇದ್ಯಾ? ಇದ್ದರೆ ಹೇಳಿ, ನಾವು ಸರಿಪಡಿಸೋಣ. ಆದರೆ ಸಾರ್ವಜನಿಕವಾಗಿ ಬೀದಿಯಲ್ಲಿ ಚರ್ಚೆ ಮಾಡೋದು ಸರಿಯಲ್ಲ. ಹೈಕಮಾಂಡ್ ವಿಷಯವಾಗಿದ್ದರೆ ಕ್ಲೋಸ್ ಡೋರ್ನಲ್ಲಿ ಚರ್ಚೆ ಮಾಡ್ಬೇಕು. ಇಲ್ಲ ಅಂದ್ರೆ ಸಿಎಲ್ಪಿ ಸಭೆಯಲ್ಲಿ ಸಮಸ್ಯೆ ಹೇಳ್ಬೇಕು,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.
ಸಿಎಲ್ಪಿ ಸಭೆಯಲ್ಲಿ ವಿಚಾರ ಮುಂದಿಟ್ಟರೆ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು. “ನಾನು ಒಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಏನ್ ತೀರ್ಮಾನ ಮಾಡ್ತಾರೆ ಅದಕ್ಕೆ ನಾನು ಬದ್ಧ,” ಎಂದು ಹೇಳುವ ಮೂಲಕ ಪಕ್ಷ ಶಿಸ್ತಿನ ಮಹತ್ವವನ್ನು ಒತ್ತಿಹೇಳಿದರು.
ಕೆಲವರು ಸಾರ್ವಜನಿಕವಾಗಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿರುವ ಕುರಿತು ಪ್ರಶ್ನಿಸಿದಾಗ, “ಆಚೆ ಕಡೆ ಮುಖ್ಯಮಂತ್ರಿ ಆಗಬೇಕು ಅಂದ್ರೆ ಆಗುತ್ತಾ ? ಈ ರೀತಿಯಾಗಿ ಹೇಳಿಕೆ ಕೊಟ್ಟರೆ ಸಾರ್ವಜನಿಕವಾಗಿ ಅನಾವಶ್ಯಕ ಚರ್ಚೆ ಆಗುತ್ತದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಶಾಸಕರ ಪತ್ರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಹಿನ್ನೆಲೆ, ಗೃಹ ಸಚಿವರ ಈ ಹೇಳಿಕೆ ಪಕ್ಷದೊಳಗಿನ ಅಸಮಾಧಾನವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಹೈಕಮಾಂಡ್ ಹೇಗೆ ಸಮಾಧಾನಪಡಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಪಕ್ಷದೊಳಗಿನ ವಿಚಾರಗಳನ್ನು ಹೊರಗೆ ತಂದು ಚರ್ಚೆ ಮಾಡುವುದಕ್ಕಿಂತ ಒಳಾಂಗಣ ವೇದಿಕೆಯಲ್ಲಿ ಪರಿಹರಿಸಬೇಕು ಎಂಬ ಸಂದೇಶವನ್ನು ಪರಮೇಶ್ವರ್ ಸ್ಪಷ್ಟವಾಗಿ ನೀಡಿದ್ದಾರೆ. ಇದೀಗ ಮುಂದಿನ ಬೆಳವಣಿಗೆಗಳತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.
