Ashwaveega News 24×7 ಫೆಬ್ರವರಿ 26 – 2026 ಬೆಂಗಳೂರು : ಆಭರಣ ಖರೀದಿಸಲು ಕಾಯುತ್ತಿದ್ದವರಿಗೆ ಮತ್ತೆ ದೊಡ್ಡ ಆಘಾತ ಎದುರಾಗಿದೆ. ಕೆಲ ದಿನಗಳ ಇಳಿಕೆಯ ಬಳಿಕ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ನಿರಂತರ ಏರಿಕೆಯ ದಾರಿಯನ್ನು ಹಿಡಿದಿವೆ . ಕಳೆದ ಒಂದು ವಾರದಿಂದಲೇ ಮಾರುಕಟ್ಟೆಯಲ್ಲಿ ಚಿನ್ನ–ಬೆಳ್ಳಿ ದರಗಳಲ್ಲಿ ಭಾರೀ ಜಂಪ್ ಕಂಡುಬಂದಿದೆ .
ಇಂದು 10 ಗ್ರಾಂ ಚಿನ್ನದ ದರವು ಸುಮಾರು 1 ಲಕ್ಷ 64 ಸಾವಿರ ರೂಪಾಯಿಗೆ ತಲುಪಿದೆ. ಕೇವಲ ಒಂದು ವಾರದಲ್ಲೇ 8ರಿಂದ 10 ಸಾವಿರ ರೂಪಾಯಿವರೆಗೆ ಏರಿಕೆಯಾಗಿದೆ ಎನ್ನಲಾಗಿದೆ. ಇದೇ ವೇಳೆ, ದೊಡ್ಡಮಟ್ಟದ ಕ್ರಾಶ್ ಬಳಿಕ ಚೇತರಿಸಿಕೊಂಡ ಬೆಳ್ಳಿ ದರವೂ ವೇಗವಾಗಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ಬೆಲೆ 2 ಲಕ್ಷ 76 ಸಾವಿರ ರೂಪಾಯಿಗೆ ತಲುಪಿದೆ .
ಜಾಗತಿಕ ಮಾರುಕಟ್ಟೆಯ ಅಸ್ಥಿರತೆ, ಡಾಲರ್ ಮೌಲ್ಯದ ಬದಲಾವಣೆ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ Donald Trump ಅವರ ತೆರಿಗೆ ನೀತಿಗಳ ಪರಿಣಾಮದಿಂದ ಅಮೆರಿಕ ಮಾರುಕಟ್ಟೆಯಲ್ಲಿ ಉಂಟಾದ ಒತ್ತಡಗಳು ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿಯನ್ನು ಹೆಚ್ಚಿಸಿವೆ . ಇದರಿಂದ ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಪರಿಗಣಿಸಲ್ಪಡುವ ಚಿನ್ನದ ಬೇಡಿಕೆ ಹೆಚ್ಚಾಗಿದೆ .
ಷೇರುಪೇಟೆ ಓಪನ್ ಆದ ಬಳಿಕ ಹೂಡಿಕೆದಾರರು ಮತ್ತೆ ಚಿನ್ನದತ್ತ ಮುಖ ಮಾಡುತ್ತಿರುವುದು ದರ ಏರಿಕೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಬೆಳವಣಿಗೆಗಳು ಹಾಗೂ ಆರ್ಥಿಕ ಅಂಶಗಳು ಚಿನ್ನ–ಬೆಳ್ಳಿ ದರದ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ .
ಒಟ್ಟಿನಲ್ಲಿ, ಮದುವೆ ಹಾಗೂ ಹಬ್ಬದ ಸೀಸನ್ ಎದುರಿಸುತ್ತಿರುವ ಗ್ರಾಹಕರು ಆಭರಣ ಖರೀದಿಗೆ ಇನ್ನಷ್ಟು ವೆಚ್ಚ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ .
