Ashwaveega News 24×7 ಜನವರಿ 05: ಮಾಹಿತಿ ಹಕ್ಕು ಕಾಯ್ದೆ ೨೦೦೫ನ್ನು ಅಧಿಕಾರಿಗಳು ಸ್ಪಷ್ಟವಾಗಿ ತಿಳಿದುಕೊಂಡರೆ, ಸಾರ್ವಜನಿಕರಿಂದ ಮಾಹಿತಿಗಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಮರ್ಪಕವಾಗಿ ಉತ್ತರ ನೀಡಬಹುದು ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಮಹೇಶ್ ವಾಳ್ವೇಕರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಜಿ.ಪಂ.ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಪಿ.ಡಿ.ಒ.ಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ ೨೦೦೫ ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಹಿತಿ ಆಯೋಗ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶ, ತೀರ್ಪುಗಳನ್ನು ಅಧಿಕಾರಿಗಳು, ನೌಕರರು ತಿಳಿದುಕೊಂಡಲ್ಲಿ ಮಾಹಿತಿ, ದಾಖಲೆಗಳನ್ನು ನೀಡಲು ಸಹಕಾರಿಯಾಗುತ್ತದೆ ಏಂದ ಅವರು, ಮಾಹಿತಿ ಕೋರಿದ ಅರ್ಜಿದಾರರಿಗೆ ವಿಳಂಬ ಮಾಡದೆ ನಿಗದಿತ ಸಮಯದೊಳಗೆ ಮಾಹಿತಿ ನೀಡಬೇಕು ಅಥವಾ ಸೂಕ್ತ ಹಿಂಬರಹ ನೀಡಬೇಕು. ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿದಾರರಿಗೆ ೩೦ ದಿನಗಳೊಳಗೆ ಮಾಹಿತಿ ನೀಡಬೇಕು. ಸ್ವೀಕರಿಸಿದ ಅರ್ಜಿಯು ಇಲಾಖೆಯ ವ್ಯಾಪ್ತಿಗೆ ಒಳಪಡದಿದ್ದರೆ ಸಂಬಂಧಪಟ್ಟವರಿಗೆ ೫ ದಿನದೊಳಗೆ ವರ್ಗಾಯಿಸಬೇಕು. ಈ ಯಾವ ಪ್ರಕ್ರಿಯೆಯನ್ವು ಅನುಸರಿಸದೇ ವಿಳಂಬ, ನಿರ್ಲಕ್ಷ್ಯ ಮಾಡಿದ ಪಕ್ಷದಲ್ಲಿ ದಂಡನೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಜನರ ಕೆಲಸಗಳು ಮುಕ್ತ ಹಾಗೂ ತ್ವರಿತವಾಗಿ ಆಗಲೆಂದು ಸಕಾಲ, ಮಾಹಿತಿ ಹಕ್ಕು ಕಾಯ್ದೆ, ಲೋಕಾಯುಕ್ತದಂತಹ ವ್ಯವಸ್ಥೆಗಳು ಸಕ್ರಿಯವಾಗಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರಲ್ಲದೆ ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಸಾರ್ವಜನಿಕ ದೂರುಗಳಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು. ಕಡತಗಳ ನಿರ್ವಹಣೆಯನ್ನು ವಿಷಯ ನಿರ್ವಾಹಕರು ಸಮರ್ಪಕವಾಗಿ ಮಾಡಬೇಕು. ವಿಳಂಬ ಧೋರಣೆ ಅನುಸರಿಸಬಾರದು ಎಂದರು.
ಆರ್ಟಿಐ ಎಂಬ ಪದ ಜನಪ್ರಿಯತೆ ಗಳಿಸಿದ್ದರೂ ಆರ್ಟಿಐ ಕಾಯ್ದೆ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ. ಮಾಹಿತಿ ಹಕ್ಕು ಕಾಯ್ದೆ ೨೦೦೫ ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಮೂಲಭೂತ ಹಕ್ಕಾಗಿದೆ. ಕೇಂದ್ರ ಸರ್ಕಾರ ೨೦೦೫ರ ಅಕ್ಟೋಬರ್ ೧೨ ರಂದು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯ್ದೆಯ ಉದ್ದೇಶ ಎಂದರು.
ಸರ್ಕಾರದಿಂದ ಮಾಹಿತಿ ಹಾಗೂ ಕಾಮಗಾರಿ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದು. ಸರ್ಕಾರ ಹೊರಡಿಸಿದ ಆದೇಶಗಳ ನಕಲನ್ನು ಕೇಳಿ ಪಡೆಯಬಹುದು. ಸರ್ಕಾರಿ ದಾಖಲೆ ಹಾಗೂ ಕಡತಗಳ ಪರಿಶೀಲನೆಗೂ ಅವಕಾಶ ಲಭ್ಯವಿದೆ. ಯಾವುದೇ ಸರ್ಕಾರದ ಯಾವುದೇ ಕಾರ್ಯವಾದರೂ ಆರ್ಟಿಐ ವ್ಯಾಪ್ತಿಗೆ ಒಳಪಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಅಧಿಕಾರ ನೀಡುವ, ಪಾರದರ್ಶಕ ಆಡಳಿತವನ್ನು ಉತ್ತೇಜಿಸುವ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವ ಒಂದು ಪ್ರಮುಖ ಸಾಧನ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಹರೀಶ್ಕುಮಾರ್ ಹಾಗೂ ಬದ್ರುದ್ದೀನ್ ಕೆ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಡಾ.ಮಹೇಶ ವಾಳ್ವೆಕರ್, ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರು

