Ashwaveega News 24×7 ಮಾರ್ಚ್ 01 – 2026 ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಇಸ್ರೇಲ್–ಇರಾನ್ ನಡುವಿನ ಸಂಘರ್ಷದ ಪರಿಣಾಮ ಬೆಂಗಳೂರಿನ ವಿಮಾನ ಸಂಚಾರದ ಮೇಲೂ ಬೀರಿದೆ. ಹಲವು ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ .
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಬೇಕಿದ್ದ 10 ವಿಮಾನಗಳನ್ನು ರದ್ದುಪಡಿಸಲಾಗಿದೆ. ಅದೇ ವೇಳೆ, ಬೆಂಗಳೂರಿಗೆ ಆಗಮಿಸಬೇಕಿದ್ದ 11 ವಿಮಾನಗಳೂ ಕ್ಯಾನ್ಸಲ್ ಆಗಿವೆ .
ದುಬೈ, ಅಬುದಾಬಿ, ದಮ್ಮನ್ ಹಾಗೂ ದೋಹಾ ಸೇರಿದಂತೆ ಪ್ರಮುಖ ಮಧ್ಯಪ್ರಾಚ್ಯ ನಗರಗಳಿಗೆ ತೆರಳಬೇಕಿದ್ದ ವಿಮಾನಗಳು ಈ ಪಟ್ಟಿಯಲ್ಲಿ ಸೇರಿವೆ. ವಾಯುಪ್ರದೇಶದ ಭದ್ರತೆ ಹಾಗೂ ಮಾರ್ಗ ಬದಲಾವಣೆ ಸಂಬಂಧಿತ ಕಾರಣಗಳಿಂದ ಏರ್ಲೈನ್ಸ್ಗಳು ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿವೆ ಎಂದು ತಿಳಿದುಬಂದಿದೆ.
ರದ್ದುಪಡಿಸಿದ ವಿಮಾನಗಳ ಕುರಿತು ಸಂಬಂಧಿತ ಏರ್ಲೈನ್ಸ್ಗಳು ಪ್ರಯಾಣಿಕರಿಗೆ SMS ಮತ್ತು ಇ-ಮೇಲ್ ಮೂಲಕ ಮಾಹಿತಿ ತಲುಪಿಸಿವೆ. ಕೆಲವು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ವ್ಯವಸ್ಥೆಗಳ ಕುರಿತು ಸಹ ಮಾಹಿತಿ ನೀಡಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ವಿಮಾನಯಾನ ವಲಯ ಮೂಲಗಳು ಸೂಚಿಸಿವೆ.
ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಗತಿ ಕುರಿತು ಸಂಬಂಧಿತ ಏರ್ಲೈನ್ಸ್ ಅಥವಾ ವಿಮಾನ ನಿಲ್ದಾಣದ ಅಧಿಕೃತ ವೆಬ್ಸೈಟ್ ಪರಿಶೀಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
