Ashwaveega News 24×7 ನವೆಂಬರ್. 17: ಬಸವನಗುಡಿಯ ದೊಡ್ಡಗಣಪತಿ ದೇವಾಲಯದ ಆವರಣದಲ್ಲಿ ಸೋಮವಾರ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಬಸವಣ್ಣನಿಗೆ ಕಡಲೆಕಾಯಿ ತಿನ್ನಿಸುವ ಮೂಲಕ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ವಿಧ್ಯುಕ್ತ ಚಾಲನೆ ನೀಡಿದರು.
ಬಸವನಗುಡಿಯ ಬಸವಣ್ಣ ದೇವಾಲಯದಲ್ಲಿ ನಡೆಯುವ ಈ ಪರಿಷೆಯನ್ನು ಇದೇ ಮೊದಲ ಬಾರಿಗೆ 2 ದಿನದಿಂದ 5 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.
ಇನ್ನು ಪರಿಷೆಗೆ ಚಾಲನೆ ನೀಡಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ”ಐನೂರು ವರ್ಷಗಳ ಐತಿಹಾಸಿಕ ಮಹತ್ವ ಹೊಂದಿರುವ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಕಳೆದ ವರ್ಷ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಜನ ಪಾಲ್ಗೊಂಡಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಮಂದಿ ಬರುವ ಸಾಧ್ಯತೆಯಿದೆ. ಹಾಗಾಗಿ, ಅಗತ್ಯ ಭದ್ರತಾ ಸಿಬ್ಬಂದಿ, ಮಾರ್ಷಲ್ಗಳ ನಿಯೋಜನೆ, ಸಿಸಿ ಕ್ಯಾಮೆರಾ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಎರಡು ದಿನಗಳ ಕಡಲೆಕಾಯಿ ಪರಿಷೆಯನ್ನು ಐದು ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ,” ಎಂದು ತಿಳಿಸಿದರು.
ಕಡಲೆಕಾಯಿ ಪರಿಷೆಯ ಮೊದಲ ದಿನವೇ ನಿರೀಕ್ಷೆಗೂ ಮೀರಿ ಜನ ಜಮಾಯಿಸಿದ್ದರು. ಪರಿಷೆಯ ಅಂದದ ನಡುವೆ ಮಕ್ಕಳು, ವಿದ್ಯಾರ್ಥಿಗಳು ಕಡಲೆಕಾಯಿ ಸವಿಯುತ್ತಾ ಸಂತಸ ವ್ಯಕ್ತಪಡಿಸಿದರು.
ಎಲ್ಲೆಡೆಯೂ ಹೂವಿನ ಅಲಂಕಾರ, ದೇವಾಲಯದ ಒಳ ಹಾಗೂ ಹೊರ ಭಾಗದಲ್ಲಿಮಾತ್ರವಲ್ಲದೆ, ಬುಲ್ ಟೆಂಪಲ್ ರಸ್ತೆ, ಗಾಂಧಿಬಜಾರ್, ಎನ್ಆರ್ ರಸ್ತೆ, ನೆಟ್ಟಕಲ್ಲಪ್ಪ ವೃತ್ತದವರೆಗೆ ವಿದ್ಯುತ್ ದೀಪಾಲಂಕಾರ ಪರಿಷೆಯ ಮೆರುಗನ್ನು ಇಮ್ಮಡಿಗೊಳಿಸಿದೆ.
