Ashwaveega News 24×7 ಮಾರ್ಚ್ 03– 2026 ಬೆಂಗಳೂರು : ಇಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಆದರೆ ಕರ್ನಾಟಕದ ಜನತೆಗೆ ಈ ಗ್ರಹಣವನ್ನು ಸಂಪೂರ್ಣವಾಗಿ ನೋಡುವ ಅವಕಾಶ ಸಿಗುವುದಿಲ್ಲ. ಸಂಜೆ 4.30ರ ವೇಳೆಗೆ ಚಂದ್ರಗ್ರಹಣ ಆರಂಭವಾದರೂ, ಆ ಸಮಯದಲ್ಲಿ ಭಾರತದಲ್ಲಿ ಚಂದ್ರೋದಯವಾಗದೇ ಇರುವುದರಿಂದ ಗ್ರಹಣ ಗೋಚರವಾಗುವುದಿಲ್ಲ.
ಇದು “ಗ್ರಸ್ತೋದಯ ಚಂದ್ರಗ್ರಹಣ”ವಾಗಿರುವುದರಿಂದ, ಚಂದ್ರೋದಯವಾದ ನಂತರವೇ ಗ್ರಹಣದ ಭಾಗ ಗೋಚರಿಸುತ್ತದೆ. ಕರ್ನಾಟಕದಲ್ಲಿ ಚಂದ್ರೋದಯವಾದ ಬಳಿಕ ಕೇವಲ ಕೊನೆಯ 9 ರಿಂದ 10 ನಿಮಿಷಗಳಷ್ಟೇ ಗ್ರಹಣ ಕಾಣಿಸಲಿದೆ. ಸಂಜೆ 6.46ರ ವೇಳೆಗೆ ಗ್ರಹಣ ಮುಗಿಯಲಿರುವುದರಿಂದ, ಗ್ರಹಣದ ಚಂದ್ರನನ್ನು ನೋಡುವುದು ಕಷ್ಟಕರವಾಗಲಿದೆ .
ಈ ಗ್ರಹಣದ ಕೇವಲ ಶೇ. 8 ರಷ್ಟು ಭಾಗ ಮಾತ್ರ ಕರ್ನಾಟಕದಲ್ಲಿ ಗೋಚರಿಸುವ ಸಾಧ್ಯತೆ ಇದೆ. ಈ ವೇಳೆಗೆ ಭೂಮಿಯ ನೆರಳು ಬಹುತೇಕ ಸರಿಯುತ್ತಿರುವುದರಿಂದ, ಗ್ರಹಣದ ಸ್ಪಷ್ಟ ದೃಶ್ಯ ಲಭ್ಯವಾಗುವ ಸಾಧ್ಯತೆ ಕಡಿಮೆ.
ಆದರೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಈ ಚಂದ್ರಗ್ರಹಣ ಸಂಪೂರ್ಣವಾಗಿ ಗೋಚರಿಸುವ ಸಾಧ್ಯತೆ ಇದೆ. ಅಲ್ಲಿನ ಜನತೆಗೆ ಆಕಾಶದಲ್ಲಿ ಅದ್ಭುತ ಖಗೋಳೀಯ ದೃಶ್ಯ ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.
ಖಗೋಳಾಸಕ್ತರು ಸೂಕ್ತ ಸ್ಥಳದಲ್ಲಿ, ನಿರ್ಬಂಧಗಳಿಲ್ಲದ ಆಕಾಶದತ್ತ ದೃಷ್ಟಿ ನೆಟ್ಟರೆ, ಗ್ರಹಣದ ಕೊನೆಯ ಕ್ಷಣಗಳನ್ನು ಕಾಣಬಹುದಾಗಿದೆ.
