
minister ramalingareddy visits kukke subrahmanya temple karnataka
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನ ಉದ್ಯಮಿ ಜೈಪುನೀತ್ ಅವರು ನಿರ್ಮಿಸಿಕೊಡುತ್ತಿರುವ ಆಶ್ಲೇಷ ಬಲಿಪೂಜಾ ಮಂದಿರದ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ದೇವಳದ ವತಿಯಿಂದ ನಿರ್ಮಾಣಗೊಳ್ಳಲಿರುವ ದಾಸೋಹ ಭವನ, ದೇವಳದ ಸುತ್ತು ಪೌಳಿ, 800 ಕೊಠಡಿಗಳ ವಸತಿ ಗೃಹ, ನೂತನ ಪಾರಂಪರಿಕ ರಥ ಬೀದಿ ಯೋಜನೆಗಳ ಅಂತಿಮ ಹಂತದ ಮಂಜೂರಾತಿಗಳ ಸಭೆಯಲ್ಲಿ ಭಾಗವಹಿಸಿದರು.
ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ದೇಶಿತ ನಿರ್ಮಾಣಗಳು ಅಂದುಕೊಂಡಂತೆ ಆದಲ್ಲಿ ಎರಡ್ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಸುಬ್ರಹ್ಮಣ್ಯ ದೇಗುಲ ಮತ್ತು ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಇರುವ ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ. ದೇಗುಲದ ಎ ಮತ್ತು ಬಿ ಗ್ರೇಡ್ ಕಾರ್ಮಿಕರ ವೇತನದಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ, ಸಿ ಗ್ರೇಡ್ ನೌಕರರ ವೇತನ ಪರಿಷ್ಕರಣೆ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು.
ಕೆಎಸ್ಆರ್ಟಿಸಿ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಎದುರಾಗಿದ್ದ ಚಾಲಕರ ಸಮಸ್ಯೆಯನ್ನು ಪರಿಹರಿಸಲಾಗಿದೆ. ಸುಮಾರು 340 ಜನ ಚಾಲಕರನ್ನು ಪುತ್ತೂರು ಡಿಪೋಗೆ ನೀಡಲಾಗಿದೆ. ಅದೇ ರೀತಿ, ಮಂಗಳೂರು ಡಿಪೋಗೂ 200ಕ್ಕೂ ಅಧಿಕ ಚಾಲಕರನ್ನು ನೀಡಲಾಗಿದೆ. ಆದ್ದರಿಂದ ಬಸ್ ಓಡಾಟದಲ್ಲಿ ಎದುರಾಗಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ಹೊಸದಾಗಿ 800ಕ್ಕೂ ಹೆಚ್ಚು ಬಸ್ಸುಗಳು ಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ದೇಗುಲಗಳು, ಪ್ರವಾಸಿ ತಾಣಗಳು ಇರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.