
transport-department-action bengaluru-98-auto-rickshaw-seized
(ಅಶ್ವವೇಗ) Ashwaveega News 24×7 ಜು.02: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಆಟೋ ಚಾಲಕರು ಪ್ರಯಾಣಿಕರ ಮಧ್ಯೆ ಬಾಡಿಗೆ ಹೊಂದಿಸುವಲ್ಲಿ ಮಾತಿನ ಚಕಮಕಿ, ಜಗಳ ಘಟನೆಗಳು ಹೆಚ್ಚಾಗಿದ್ದು ಕಂಡು ಬಂದಿದೆ. ಕೆಲವು ಆಟೋ ಚಾಲಕರು ಸದ್ಯದ ಪರಿಸ್ಥಿತಿ ನೋಡಿಕೊಂಡು ದುಪಟ್ಟು ಹಣ ವಸೂಲಿಗೆ ಮುಂದಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರಾಪಿಡೋ ಬೈಕ್ ಹಾಗೂ ಒಲಾ, ಊಬರ್ ಟ್ಯಾಕ್ಸಿ ಸೇವೆಗಳನ್ನು ರದ್ದು ಮಾಡಿ ಆದೇಶಿಸಿದೆ. ಈ ನಿಷೇಧ ಆದೇಶ ಬಳಿಕ ಸಾರ್ವಜನಿಕರು ಆಟೋ, ಬಸ್ ಇತರ ಸಾರಿಗೆ ಅವಲಂಬಿಸಬೇಕಾಯಿತು.
ಇದೇ ಸಮಯದ ದುರಪಯೋಪಕ್ಕೆ ಮುಂದಾದ ಕೆಲವು ಆಟೋ ಚಾಲಕರು ಮನ ಬಂದಂತೆ ನಿಗದಿತ ಚಾರ್ಜ್ಗಿಂತಲೂ ಮೂರು ಪಟ್ಟು ಹೆಚ್ಚು ಹಣ ಕಿಳುತ್ತಿದ್ದಾರೆ. ಈ ಕುರಿತು ವಿಡಿಯೋಗಳು ವೈರಲ್ ಆಗಿವೆ. ಇದೇ ಕಾರಣಕ್ಕೆ ಜನರು ರಾಪಿಡೋ, ಟ್ಯಾಕ್ಸಿ ಮೊರೆ ಹೊಗುತ್ತಿದ್ದರು. 90ರಷ್ಟು ಆಟೋಗಳ ಚಾಲಕರು ರೌಡಿಗಳಂತೆ ದರ್ಪ ತೋರುತ್ತಾರೆ. ಸೌಜನ್ಯಯುತವಾಗಿ ವರ್ತಿಸುವುದಿಲ್ಲ. ನಿಮ್ಮಂಥವರಿಂದಲೇ ಅದೆಷ್ಟೋ ಒಳ್ಳೆಯ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬ ಆಕ್ರೋಶ ಕೇಳಿ ಬರ್ತಿದೆ.
ಇನ್ನು ಇದರ ನಡುವೆ ಸಾರ್ವಜನಿಕರಿಂದ ನಿಗದಿಗಿಂತ ಅಧಿಕ ಪ್ರಯಾಣ ದರ ವಸೂಲಿ ಮಾಡುತ್ತಿರುವ ಹಾಗೂ ಕಾನೂನುಬಾಹಿರವಾಗಿ ಸಂಚರಿಸುತ್ತಿರುವ ಆಟೋಗಳ ವಿರುದ್ಧ ಸಮರ ಸಾರಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಸೋಮವಾರ ಒಂದೇ ದಿನ 260 ಪ್ರಕರಣ ದಾಖಲಿಸಿ, 98 ಆಟೋಗಳನ್ನು ಜಪ್ತಿ ಮಾಡಿದ್ದಾರೆ.ಆ್ಯಪ್ ಆಧಾರಿತ ಆಟೋಗಳು ಹಾಗೂ ಇನ್ನಿತರೆ ಆಟೋ ಚಾಲಕರು ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚು ದರ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ದೂರುಗಳು ಬರುತ್ತಿವೆ.
ಹೀಗಾಗಿ, ಅಧಿಕ ದರ ವಸೂಲಿ ಮಾಡುತ್ತಿರುವ ಆಟೋಗಳ ಪರ್ಮಿಟ್ ರದ್ದು ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ ಎರಡು ತಂಡಗಳಂತೆ ಒಟ್ಟು 22 ತಂಡಗಳು ಕಾರ್ಯಾಚರಣೆ ಕೈಗೊಂಡು ಅಧಿಕ ದರ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 260 ಪ್ರಕರಣ ದಾಖಲಿಸಿ, 98 ಆಟೋಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.