Ashwaveega News 24×7 ಡಿಸೆಂಬರ್. 10: ಸಾರಿಗೆ ಇಲಾಖೆಯಲ್ಲಿ ಸಾರಿಗೆ ವಾಹನ ತಪಾಸಣೆಯ ಇನ್ಸ್ʼಪೆಕ್ಟರ್ ಹುದ್ದೆಗೆ ಬಡ್ತಿ ಪಡೆಯಲು ಸುಮಾರು 50 ಗ್ರೂಪ್ ʼಸಿʼ ಲಿಪಿಕ ಸಿಬ್ಬಂದಿ ತಾಂತ್ರಿಕ ಶಿಕ್ಷಣದ ನಕಲಿ ಸೇವಾನುಭವ ಪ್ರಮಾಣಪತ್ರ ನೀಡಿ, ಸಂಜೆ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಓದುತ್ತಿರುವ ಆರೋಪವಿದ್ದು, ಈ ಸಂಬಂಧ ಎಸ್ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಒತ್ತಾಯಿಸಿದರು.
ಸಾರಿಗೆ ಅಕ್ರಮದ ಕುರಿತು ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಉತ್ತರ ನೀಡಿದರು. ಸಾರಿಗೆ ಇಲಾಖೆಯ ಲಿಪಿಕ ಸಿಬ್ಬಂದಿ ಕಾನೂನು ಬಾಹಿರವಾಗಿ ನಕಲಿ ಸೇವಾನುಭವ ಪ್ರಮಾಣ ಪತ್ರ ಪಡೆದಿರುವುದು ಇನ್ನೂ ತನಿಖೆಯ ಹಂತದಲ್ಲಿದೆ. ಶೀಘ್ತದಲ್ಲಿ ಋಜುವಾತಾದಲ್ಲಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
“ಶರವಣ” ಹೇಳಿದ್ದೇನು..?
ಸಾರಿಗೆ ಇಲಾಖೆ ಭಡ್ತಿ ಹಿಂದೆ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಅನುಮಾನವಿದೆ. ಇಲಾಖೆಯ ನೇಮಕಾತಿ ಹಾಗೂ ಬಡ್ತಿ ನಿಯಮಾವಳಿಯೇ ದೋಷಪೂರಿತವಾಗಿದೆ. ಇದರ ಹಿಂದೆ ವ್ಯವಸ್ಥಿತ ಜಾಲವೇ ಇದ್ದು, ಸರ್ಕಾರ ತಕ್ಷಣ ಎಸ್ಐಟಿ ರಚನೆ ಮಾಡಿ, ಶಿಕ್ಷಣ ಸಂಸ್ಥೆ ಮೇಲೆ ದಾಳಿ ಮಾಡಬೇಕು. ವ್ಯಾಸಂಗ ಮಾಡುತ್ತಿರುವ ಇಲಾಖಾ ಸಿಬ್ಬಂದಿಯ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಬೇಕು. ವಂಚನೆ ಮಾಡಿರುವ ಅಭ್ಯರ್ಥಿಗಳನ್ನು ಬಂಧಿಸಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ತಿದ್ದುಪಡಿಯೇ ದೋಷಪೂರಿತ:
ಎಸ್ಎಸ್ಎಲ್ʼಸಿ ಉತ್ತೀರ್ಣರಾದರೆ ಸಾಕು, ಇನ್ಸ್ಪೆಕ್ಟರ್ ಆಫ್ ಮೋಟಾರ್ ವೆಹಿಕಲ್ ಹುದ್ದೆಯನ್ನು ಪಡೆಯಬಹುದು ಎಂದು ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದೇ ಅಕ್ರಮವಾಗಿದೆ. ಇಲಾಖೆಯಲ್ಲಿ ಇರುವ ಸಿಬ್ಬಂದಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎನ್ನುವ ನೆಪದಲ್ಲಿ ಶೇಕಡಾ 5ರಷ್ಟು ಮೀಸಲಾತಿ ನೀಡಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಮೂಲತಃ ಈ ತಿದ್ದುಪಡಿಯೇ ದೋಷಪೂರಿತವಾಗಿದೆ. ಇಂಥ ಉನ್ನತ ಹುದ್ದೆಗಳಿಗೆ ಇಲಾಖಾವಾರು ಬಡ್ತಿ ನೀಡಬೇಕಾದರೆ ತಾಂತ್ರಿಕ ಶಿಕ್ಷಣದ ಅಗತ್ಯವಿದೆ. ಎಸ್ಎಸ್ಎಲ್ʼಸಿ ಪಾಸ್ ಮಾಡಿಕೊಂಡು ಇಲಾಖೆಯಲ್ಲಿ ಚಾಲಕ, ಪ್ರಥಮ ದರ್ಜೆ ಸಹಾಯಕ(ಎಫ್ಡಿಎ) ಆದವರು ಇನ್ಸ್ಪೆಕ್ಟರ್ ಆಫ್ ಮೋಟಾರ್ ವೆಹಿಕಲ್ ಹುದ್ದೆಗೇರಲು ಹೇಗೆ ಸಾಧ್ಯವಿದೆ ಎಂದು ಶರವಣ ಅವರು ಪ್ರಶ್ನಿಸಿದರು. ಹಾಗಾಗಿ ಸರ್ಕಾರದ ನೇಮಕಾತಿಯೇ ದೋಷಪೂರಿತವಾಗಿ ಆಗಿದೆ. ಇದರಿಂದ ಹಿಂದೆ ದೊಡ್ಡ ಜಾಲವೇ ಕಾರ್ಯ ನಿರ್ವಹಿಸುತ್ತಿದೆ ಎಂದು ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ಶರವಣ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಎರಡು ವರ್ಷದ ಅನುಭವ ಬೇಕು:
ಎಸ್ಎಸ್ಎಲ್ಸಿ ಓದಿದ ಮೇಲೆ ನೋಂದಾಯಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ 2 ವರ್ಷ ಓದಿನ ಜೊತೆಗೆ ಕಾರ್ಯ ನಿರ್ವಹಣೆ ಮಾಡಿ ಅನುಭವ ಪಡೆದಿರಬೇಕು. ನಂತರ ಡಿಪ್ಲೊಮಾ ತಾಂತ್ರಿಕ ಶಿಕ್ಷಣಕ್ಕೆ ಅರ್ಹತೆ ಪಡೆಯುತ್ತಾರೆ. ಆ ನಂತರ ಇನ್ಸ್ಪೆಕ್ಟರ್ ಆಫ್ ಮೋಟಾರ್ ವೆಹಿಕಲ್ ಹುದ್ದೆಗೆ ಅವರು ಆಯ್ಕೆಯಾಗಲು ಅರ್ಹತೆ ಹೊಂದುತ್ತಾರೆ. ರಾತ್ರಿ ಡಿಪ್ಲೊಮಾ ಮಾಲೇಜ್ ನಲ್ಲಿ ಓದಲು ಕಚೇರಿಯಿಂದ ಕಾಲೇಜ್ 30 ಕಿಮೀ ವ್ಯಾಪ್ತಿಯ ಒಳಗಿರಬೇಕು ಎಂದಿದೆ. ಆದರೆ, ಬೆಂಗಳೂರು ಮಲ್ಲೇಶ್ವರಂ ಕಾಲೇಜ್’ನಲ್ಲಿ ತುಮಕೂರು, ಕಲಬುರಗಿ ಭಾಗದವರೂ ಓದಿದ್ದೇವೆ ಎಂದು ಪ್ರಮಾಣಪತ್ರ ನೀಡಿದ್ದಾರೆ. ಸಾಯಂಕಾಲ 5 ಗಂಟೆಯವರೆಗೆ ಕೆಲಸ ಮಾಡಿ, ನೂರಾರು ಕಿಮೀ ದೂರದ ಕಾಲೇಜ್’ಗೆ ಹೇಗೆ ಬರಲು ಸಾಧ್ಯ ಎಂದು ಶರವಣ ಅವರು ಪ್ರಶ್ನಿಸಿದರು.
ಎರಡು ವರ್ಷದ ತಾಂತ್ರಿಕ ಶಿಕ್ಷಣ ಪಡೆದರೆ ಮಾತ್ರ ಸಂಜೆ ಕಾಲೇಜ್ನಲ್ಲಿ ಡಿಪ್ಲೊಮಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅರ್ಹತೆ ಇರುತ್ತದೆ. ಆದರೆ, ಈ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ತಾಂತ್ರಿಕ ಶಿಕ್ಷಣ, ಅನುಭವ ಇಲ್ಲದ ಕ್ಲಾರಿಕಲ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕರು ಕೂಡ ನಕಲಿ ತಾಂತ್ರಿಕ ಶಿಕ್ಷಣದ ಅನುಭವದ ಪ್ರಮಾಣಪತ್ರ ನೀಡಿ, ಇನ್ಸ್ಪೆಕ್ಟರ್ ಆಫ್ ಮೋಟಾರ್ ವೆಹಿಕಲ್ ಆಗಬೇಕು ಅನ್ನುವ ಕಾರಣಕ್ಕೆ ಜೆಪಿ ನಗರದ ಆಕ್ಸ್ಫರ್ಡ್ ಸಂಜೆ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಪ್ರವೇಶ ಪಡೆದಿದ್ದಾರೆ. 42 ಜನ ಅಲ್ಲಿಯದ್ದೇ ಪ್ರಮಾಣಪತ್ರ ನೀಡಿದ್ದಾರೆ. ಇದರಲ್ಲಿ ದೊಡ್ಡ ಕರ್ಮಕಾಂಡವೇ ಇದರಲ್ಲಿ ನಡೆದಿದೆ. ಇದೊಂದು ಕಾನೂನು ಬಾಹಿರ ಅಪರಾಧ. ಇದೊಂದು ಕ್ರಿಮಿನಲ್ ಸಂಚು. ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಇಲಾಖೆಗೆ ಮಾಡುವ ವಂಚನೆಯಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಶರವಣ ಒತ್ತಾಯಿಸಿದರು.
ಸಚಿವರು ಹೇಳಿದ್ದೇನು..?
ಟಿ.ಎ.ಶರವಣ ಅವರು ಸಾರಿಗೆ ಇಲಾಖೆಯಲ್ಲಿ ಗ್ರೂಪ್ ʼಸಿʼ ವೃಂದದಿಂದ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಶೇ. 5ರಷ್ಟು ಬಡ್ತಿ ನೀಡಲು ಇರುವ ನಿಯಮಗಳೇನು..? ಸಾರಿಗೆ ಇಲಾಖೆಯ 50 ರಷ್ಟು ಸಿಬ್ಬಂದಿ 2 ವರ್ಷಗಳ ತಾಂತ್ರಿಕ ಶಿಕ್ಷಣದ ನಕಲಿ ಸೇವಾನುಭವ ಪ್ರಮಾಣಪತ್ರ ನೀಡಿ ಸಂಜೆ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿರುವುದು ಗಮನಕ್ಕೆ ಬಂದಿದೆಯೇ..? ಬಂದಿದ್ದರೆ, ಅಂಥವರ ಮೇಲೆ ಯಾವ ಕ್ರಮ ವಹಿಸಲಾಗಿದೆ..? ಎಂದು ಟಿ.ಎ.ಶರವಣ ಪ್ರಶ್ನೆ ಮಾಡಿದ್ದರು.
ಅದಕ್ಕೆ ಲಿಖಿತ ಉತ್ತರ ನೀಡಿದ ಸಾರಿಗೆ ಸಚಿವರು, ಬೆಂಗಳೂರು ಮಹಾನಗರ ವ್ಯಾಪ್ತಿಯ ಸಾರಿಗೆ ಇಲಾಖೆಯ ವಿವಿಧ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 56 ಗ್ರೂಪ್ -‘ಸಿ’ ಲಿಪಿಕ ಸಿಬ್ಬಂದಿ ಇಲಾಖೆಯ ಮುಖ್ಯಸ್ಥರಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆದಿದ್ದಾರೆ. ನಿಯಮಾನುಸಾರವೇ ಎನ್ಒಸಿ ನೀಡಲಾಗಿದೆ. ಆದರೆ, ಕೆಲವು ಸಾರಿಗೆ ಇಲಾಖೆ ನೌಕರರು ನಕಲಿ ಸೇವಾನುಭವ ಪ್ರಮಾಣಪತ್ರ ಪಡೆದು, ಸಂಜೆ ಪಾಲಿಟೆಕ್ನಿಕ್ನಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ದೂರಿನ ಕುರಿತು ವರದಿ ಸಲ್ಲಿಸುವಂತೆ ಸಾರಿಗೆ ಇಲಾಖೆ ಆಯುಕ್ತರು ತಾಂತ್ರಿಕ ಶಿಕ್ಷಣ ಇಲಾಖೆಗೆ ಕೋರಿದ್ದರು. ಅದರಂತೆ ತಾಂತ್ರಿಕ ಶಿಕ್ಷಣ ಇಲಾಖೆ ತನಿಖೆ ನಡೆಸಿ ಸೆಪ್ಟೆಂಬರ್ 12ರಂದು ವರದಿ ಸಲ್ಲಿಸಿದೆ.
ಅರೆಕಾಲಿಕ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಗೆ 2 ವರ್ಷಗಳ ತಾಂತ್ರಿಕ ಸೇವಾನುಭವದೊಂದಿಗೆ ಸಂಬಂಧಪಟ್ಟ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ದೂರಿನಲ್ಲಿ ನಮೂದಿಸಿದ 49 ಅಭ್ಯರ್ಥಿಗಳ ಪ್ರವೇಶದ ಸಂಪೂರ್ಣ ತನಿಖಾ ವರದಿಯನ್ನು ಲಗತ್ತಿಸಿ, 2 ವರ್ಷಗಳ ತಾಂತ್ರಿಕ ಸೇವಾನುಭವದ ನೈಜತೆಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ವರದಿ ನೀಡಿದ್ದಾರೆ. ಆದರೆ, ಸಾರಿಗೆ ಇಲಾಖೆಯಿಂದ ತಾಂತ್ರಿಕ ಸೇವಾನುಭವದ ನೈಜತೆಯನ್ನು ಪರಿಶೀಲಿಸಲು ಅವಕಾಶ ಇಲ್ಲದಿರುವುದರಿಂದ ತಾಂತ್ರಿಕ ಶಿಕ್ಷಣ ಇಲಾಖೆಯಿಂದಲೇ ಪರಿಶೀಲನೆ ನಡೆಸಿ ಕೊಡಬೇಕು ಎಂದು ಸಾರಿಗೆ ಇಲಾಖೆ ಆಯುಕ್ತರು ಮರು ಪತ್ರ ಬರೆದಿದ್ದಾರೆ. ಅವರಿಂದ ಮುಂದಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಲಿಖಿತ ತಿಳಿಸಿದ್ದರು.
