
vijayendra takes dig against state congress government karnataka
ರಾಜ್ಯದಲ್ಲಿ ಕಮಿಷನ್ ಮೂಲಕ ಆಡಳಿತ ನಡೆದಿದೆ. ಇದೆಲ್ಲವನ್ನೂ ನೋಡಿಕೊಂಡು ಸಿಎಂ ಸಿದ್ದರಾಮಯ್ಯ ಅವರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಇರಲು ಅನ್ಫಿಟ್. ಹಾಗಾಗಿ, ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ನ ಶಾಸಕರೇ ಹತಾಶರಾಗಿದ್ದಾರೆ. ಈ ಸರ್ಕಾರ ಇದೆಯೋ, ಸತ್ತು ಹೋಗಿದೆಯೋ ಗೊತ್ತಿಲ್ಲ. ಲಂಚ ಇಲ್ಲದೇ ಸರ್ಕಾರದಲ್ಲಿ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ. ಕಮಿಷನ್ ಮಾಫಿಯಾ ಮೂಲಕ ಆಡಳಿತ ನಡೆದಿದೆ ಎಂದು ದೂರಿದರು.
ಸ್ವತಃ ಈ ಕಮಿಷನ್ ಏಜೆಂಟರ್ನ್ನು ಸಿದ್ದರಾಮಯ್ಯ ಅವರೇ ನೇಮಿಸಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, ಮಾಜಿ ಸಿಎಂ ಡಿ.ದೇವರಾಜ ಅರಸು ದಾಖಲೆ ಮುರಿಯಬೇಕೆಂದು ಮುಖ್ಯಮಂತ್ರಿ ಕುರ್ಚಿಗೆ ಸಿದ್ದರಾಮಯ್ಯ ಅಂಟಿ ಕುಳಿತಿದ್ದಾರೆ. ಅವರು ಸರ್ಕಾರದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ವಸೂಲಿಗೆ ಟಾಸ್ಕ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ರಾಜ್ಯ ಸರ್ಕಾರದ ಪರಿಸ್ಥಿತಿ ನೋಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೆ ಹತಾಶರಾಗಿದ್ದಾರೆ. ಭ್ರಷ್ಟಾಚಾರಕ್ಕಾಗಿ ಸಚಿವರು ಕೌಂಟರ್ಗಳನ್ನು ತೆರೆದು ಕುಳಿತಿದ್ದಾರೆ. ಮುಖ್ಯಮಂತ್ರಿಗಳಿಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ, ಇಲ್ಲದಿದ್ದರೆ, ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ, ಗೋಪಾಲಕೃಷ್ಣ ಅವರು ಎತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇನು ಉತ್ತರ ಕೊಡುತ್ತಾರೆ ಎಂದು ವಿಜಯೇಂದ್ರ ಪ್ರಶ್ನಿಸಿದರು.