Ashwaveega News 24×7 ಜನವರಿ 16 – ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ವಿತರಿಸಲಾದ ಕಳಪೆ ಗುಣಮಟ್ಟದ ಸುರಕ್ಷತಾ ಕಿಟ್ಗಳ ವಿರುದ್ಧ ಕಟ್ಟಡ ಕಾರ್ಮಿಕರು ಸಿಡಿದೆದ್ದು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ನೀಡಿದ ಕಿಟ್ನಲ್ಲಿ ಇರುವ ಹೆಲ್ಮೆಟ್, ಶೂ, ಹ್ಯಾಂಡ್ ಗ್ಲೌಸ್ ಮತ್ತು ಕಣ್ಣಿನ ಗ್ಲಾಸ್ಗಳು ಸಂಪೂರ್ಣವಾಗಿ ಕಳಪೆ ಗುಣಮಟ್ಟದವಾಗಿದ್ದು, ಕೆಲಸಕ್ಕೆ ಬಳಸಲು ಅಸಮರ್ಥವಾಗಿವೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇಂತಹ ಕಳಪೆ ಹೆಲ್ಮೆಟ್, ಶೂ ಕೊಟ್ಟರೆ ನಾವು ಹೇಗೆ ಕೆಲಸ ಮಾಡಬೇಕು? ನಮ್ಮ ಪ್ರಾಣದ ಭದ್ರತೆ ಯಾರು ಹೊಣೆ?” ಎಂದು ಪ್ರಶ್ನಿಸಿದ ಕಾರ್ಮಿಕರು, ಕಳಪೆ ಕಿಟ್ಗಳನ್ನು ನೆಲಕ್ಕೆ ಸುರಿದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಹ್ಯಾಂಡ್ ಗ್ಲೌಸ್ ಹರಿದು ಹೋಗುತ್ತಿವೆ, ಗ್ಲಾಸ್ಗಳು ಸರಿಯಾಗಿ ಹಿಡಿಯುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಮಿಕರು, “ಯಾರಿಗೆ ಬೇಕ್ರೀ ಇವೆಲ್ಲಾ? ಇವು ನಮಗೆ ಬೇಡ. ನಮಗೆ ಗುಣಮಟ್ಟದ ವಸ್ತು ಒಳಗೊಂಡ ಸುರಕ್ಷತಾ ಕಿಟ್” ಬೇಕು ಎಂದು ಘೋಷಣೆಗಳನ್ನು ಕೂಗಿದರು. ಕೆಲಸದ ಸ್ಥಳದಲ್ಲಿ ಪ್ರತಿದಿನ ಅಪಾಯದ ನಡುವೆ ದುಡಿಯುವ ನಮಗೆ ಕನಿಷ್ಠ ಸುರಕ್ಷತೆ ಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಕಾರ್ಮಿಕರು ತಮ್ಮ ಬೇಡಿಕೆಗಳ ಪಟ್ಟಿಯನ್ನೂ ಮುಂದಿಟ್ಟಿದ್ದಾರೆ. ಮಕ್ಕಳಿಗೆ ಕಾಲಕಾಲಕ್ಕೆ ಸ್ಕಾಲರ್ಶಿಪ್ ನೀಡಬೇಕು, ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಸಹಾಯಧನ ನೀಡಬೇಕು, ಹಾಗೂ ಕೇವಲ ಹೆಸರಿಗಷ್ಟೇ ಅಲ್ಲದೆ ನಿಜವಾದ ಗುಣಮಟ್ಟದ ಕಿಟ್ಗಳನ್ನು ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಿಂದ ಕೆಲ ಕಾಲ ಗೊಂದಲ ಉಂಟಾಗಿದ್ದು, ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಮನವಿಯನ್ನು ಆಲಿಸಿದರು. ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ಶಾಂತವಾಯಿತು.
ಒಟ್ಟಾರೆ, ಕಳಪೆ ಕಿಟ್ ವಿತರಣೆಯು ಕಟ್ಟಡ ಕಾರ್ಮಿಕರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
