Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಗ್ಯಾರಂಟಿ ಯೋಜನೆಗಳ ವಿಚಾರ ಮತ್ತೆ ಬಿಸಿ ತಟ್ಟಿದೆ . ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದರೆ ಜನರು ಬಡಿಗೆ ತಗೊಂಡು ಹೊಡೀತಾರೆ ” ಎಂದು ಎಚ್ಚರಿಕೆಯ ಸ್ವರದಲ್ಲಿ ಮಾತನಾಡಿದ ವಿಜಯೇಂದ್ರ , ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಕೊಟ್ಟ ಭರವಸೆಗಳನ್ನು ಈಗ ಜಾರಿಗೊಳಿಸಲೇಬೇಕು ಎಂದು ಆಗ್ರಹಿಸಿದರು. “ನಕ್ಷತ್ರ ಬೇಕಾದ್ರೂ ತಂದು ಕೊಡ್ತೇವೆ” ಎಂದು ಅಧಿಕಾರಕ್ಕೆ ಬರಲು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಈಗ ಗ್ಯಾರಂಟಿಗಳ ಜಾರಿಗೆ ಅಡ್ಡಿ ಬರುತ್ತಿದೆ ಎಂದು ಆರೋಪಿಸಿದರು.
ಕೆಎಸ್ಆರ್ಟಿಸಿ ಬಸ್ ಸೇವೆಗಳ ವಿಚಾರ ಪ್ರಸ್ತಾಪಿಸಿದ ವಿಜಯೇಂದ್ರ, “ಡಕೋಟ ಬಸ್ ಓಡಿಸುವಂತ ಸ್ಥಿತಿ ಬಂದಿದೆ. ಸರ್ಕಾರದ ಯಾವುದೇ ಯೋಜನೆಯೂ ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ” ಎಂದು ಟೀಕಿಸಿದರು. ರಾಜ್ಯದ ಜನರಿಗೆ ನೀಡಿದ ಮಾತು ತಪ್ಪಿದರೆ ಅದರ ಪರಿಣಾಮ ಗಂಭೀರವಾಗುತ್ತದೆ ಎಂದು ಎಚ್ಚರಿಸಿದರು.
ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಈಗ ಆ ಭರವಸೆಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಸಾಧ್ಯವಿಲ್ಲ. “ಗ್ಯಾರಂಟಿ ಕೊಡ್ತೇವೆ ಅಂತ ಹೇಳಿದ್ರೆ , ಕೊಡಲೇಬೇಕು. ಜನರ ವಿಶ್ವಾಸಕ್ಕೆ ಧಕ್ಕೆ ತರಬಾರದು” ಎಂದು ವಿಜಯೇಂದ್ರ ಒತ್ತಾಯಿಸಿದರು.
ಸಿದ್ದು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಅವರು ಓಪನ್ ವಾರ್ನಿಂಗ್ ನೀಡಿದರು. ಈ ಹೇಳಿಕೆಯಿಂದ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.
