Ashwaveega News 24×7 ಜನವರಿ 16 – ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಭಾರೀ ಗೊಂದಲ ಆರಂಭವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಸೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ನಾಳೆ ಜೆಡಿಎಸ್ ನಾಯಕರ ಹೈವೋಲ್ಟೇಜ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ಹೇಗೆ ಪ್ರತಿರೋಧ ನೀಡಬೇಕು ಎಂಬುದರ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ .
ಜನವರಿ 22ರಿಂದ ಏಳು ದಿನಗಳ ಕಾಲ ವಿಶೇಷ ಅಧಿವೇಶನವನ್ನು ನಡೆಸಲು ಸರ್ಕಾರ ನಿರ್ಧರಿಸಿದ್ದು, ಆದರೆ ಮೂರು ದಿನಗಳ ಕಾಲ ಮಾತ್ರ ವಿಶೇಷ ಅಧಿವೇಶನ ನಡೆಸುವ ಉದ್ದೇಶದ ಮೇಲೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ …
ಈ ಅಧಿವೇಶನದಲ್ಲಿ ಜಿ ರಾಮ್ ಜಿ ಬಿಲ್ಲನ್ನು ಅಂಗೀಕರಿಸುವ ಸಾಧ್ಯತೆ ಇರುವುದರಿಂದ, ಅದನ್ನು ತಿರಸ್ಕರಿಸುವಂತೆ ಜೆಡಿಎಸ್ ಹಾಗೂ ಬಿಜೆಪಿ ಒತ್ತಾಯಿಸುತ್ತಿವೆ. ಈ ಬಿಲ್ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು, ಇದನ್ನು ವಿರೋಧಿಸಿ ಸದನದ ಒಳಗೂ ಹೊರಗೂ ಹೋರಾಟ ನಡೆಸಲು ಸಿದ್ಧತೆ ನಡೆಸಿವೆ …
ಸರ್ಕಾರದ ವಿರುದ್ಧ ವಿಪಕ್ಷಗಳು “ಅಸಹಕಾರದ ಸಮರ” ಘೋಷಿಸಿದ್ದು, ಅಗತ್ಯವಿದ್ದರೆ ಜಂಟಿ ಸದನವನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ನಿರ್ಧಾರಕ್ಕೂ ಬರಬಹುದು ಅಂತ ಹೇಳಲಾಗಿದೆ .. ಇದರಿಂದಾಗಿ ಸದಸ್ಯರೇ ಇಲ್ಲದೇ ಸದನ ನಡೆಸುವ ಪರಿಸ್ಥಿತಿ ಎದುರಾಗುವ ಸಾಧ್ಯತೆಯೂ ಇದೆ .
ನಾಳೆಯ ಜೆಡಿಎಸ್ ನಾಯಕರ ಸಭೆಯಲ್ಲಿ ಬಿಜೆಪಿ ನಾಯಕರ ಜೊತೆಗೆ ಸಮನ್ವಯ ಸಾಧಿಸಿ, ಜಂಟಿ ಹೋರಾಟದ ಅಂತಿಮ ರೂಪರೇಖೆ ತಯಾರಿಸುವ ಸಾಧ್ಯತೆ ಇದೆ. ಅಧಿವೇಶನದ ವೇಳೆ ಸದನದ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದು, ಬಹಿಷ್ಕಾರ, ಪ್ರತಿಭಟನೆ ಮತ್ತು ಸಾರ್ವಜನಿಕ ಹೋರಾಟಗಳ ಕುರಿತು ಚರ್ಚೆ ನಡೆಯಲಿದೆ .
ಒಟ್ಟಾರೆ, ವಿಶೇಷ ಅಧಿವೇಶನವನ್ನು ಕರೆದ ಸರ್ಕಾರಕ್ಕೆ ವಿಪಕ್ಷಗಳಿಂದ ಭಾರೀ ರಾಜಕೀಯ ಶಾಕ್ ಎದುರಾಗುವ ಸಾಧ್ಯತೆ ಹೆಚ್ಚಿದ್ದು, ಮುಂದಿನ ಕೆಲ ದಿನಗಳಲ್ಲಿ ರಾಜ್ಯ ರಾಜಕೀಯ ಮತ್ತಷ್ಟು ತೀವ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ .
