Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : ನಗರದಲ್ಲಿ ಬ್ಯಾಂಕ್ ದರೋಡೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. Canara Bank ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು , ಜನರ ದುಡ್ಡಿನ ಭದ್ರತೆ ಬಗ್ಗೆ ಆತಂಕ ಮೂಡಿಸಿದೆ .
ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಖದೀಮ ಬ್ಯಾಂಕ್ಗೆ ನುಗ್ಗಿ ಲೂಟಿಗೆ ಯತ್ನಿಸಿದ್ದಾನೆ. ಬ್ಯಾಂಕ್ ಒಳಗೆ ಪ್ರವೇಶಿಸಿದ ಕಳ್ಳ ಸಿಸಿಟಿವಿ ಕ್ಯಾಮೆರಾವನ್ನು ಕೆಳಕ್ಕೆ ಬಗ್ಗಿಸಿ, ಸ್ಟ್ರಾಂಗ್ ರೂಂ ಭಾಗದತ್ತ ತೆರಳಿರುವುದು ತಿಳಿದುಬಂದಿದೆ. ಆದರೆ ಸೈರನ್ ಆನ್ ಆಗುತ್ತಿದ್ದಂತೆಯೇ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಕಳ್ಳನ ಚಲನವಲನ ಬ್ಯಾಂಕ್ನ ಇತರ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ Sheshadripuram Police Station ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಡಾಗ್ ಸ್ಕ್ವಾಡ್ ಹಾಗೂ ಫಿಂಗರ್ಪ್ರಿಂಟ್ ತಜ್ಞರ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬ್ಯಾಂಕ್ ಭದ್ರತೆ ಕುರಿತು ಪ್ರಶ್ನೆಗಳು ಎದ್ದಿರುವ ಈ ಘಟನೆ, ರಾತ್ರಿ ಸಮಯದ ಭದ್ರತಾ ವ್ಯವಸ್ಥೆಗಳ ಮೇಲಿನ ನಿಗಾವನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿದೆ.
