Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : ನಗರದ ಮಹಾಲಕ್ಷ್ಮೀ ಲೇಔಟ್ ಸಮೀಪ ಇಂದು ಬೆಳಿಗ್ಗೆ ಶಾಲಾ ಮಕ್ಕಳನ್ನು ಪಿಕ್ ಮಾಡುತ್ತಿದ್ದ ಸ್ಕೂಲ್ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬ್ರೇಕ್ ಫೇಲ್ ಆಗಿರುವುದೇ ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
National Public Schoolಗೆ ಸೇರಿದ ಬಸ್ ಮಕ್ಕಳನ್ನು ಮನೆಗಳಿಂದ ಪಿಕ್ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಎಲೆಕ್ಟ್ರಿಕ್ ಪೋಲ್ಗೆ ಡಿಕ್ಕಿ ಹೊಡೆದಿದೆ. ಬಸ್ನಲ್ಲಿ ಹಲವಾರು ಮಕ್ಕಳು ಇದ್ದರೂ, ಪವಾಡ ಸದೃಶವಾಗಿ ಯಾವುದೇ ಗಂಭೀರ ಗಾಯಗಳಿಲ್ಲದೆ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ .
ಅಪಘಾತದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಗೊಂಡಿದ್ದು, ಬಸ್ ವೇಗವಾಗಿ ಬಂದು ಏಕಾಏಕಿ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆಯುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತದೆ .
ಘಟನಾ ಸ್ಥಳಕ್ಕೆ Malleshwaram Traffic Police ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಬಸ್ನ ತಾಂತ್ರಿಕ ದೋಷಗಳ ಕುರಿತು ತಪಾಸಣೆ ನಡೆಸಲಾಗುತ್ತಿದೆ .
ಸ್ಥಳೀಯರು ತಕ್ಷಣ ಸ್ಪಂದಿಸಿ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ಶಾಲಾ ವಾಹನಗಳ ಸುರಕ್ಷತೆ ಮತ್ತು ನಿರ್ವಹಣೆಯ ಕುರಿತು ಮತ್ತೆ ಪ್ರಶ್ನೆ ಎಬ್ಬಿಸಿದೆ .
