Ashwaveega News 24×7 ಮಾರ್ಚ್ 03 – 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ನಡುವೆ, ಇರಾನ್ ವಿರುದ್ಧ ಅಮೆರಿಕದ ಮಾಜಿ ಅಧ್ಯಕ್ಷ Donald Trump ಕಠಿಣ ಎಚ್ಚರಿಕೆ ನೀಡಿದ್ದಾರೆ. “ಪ್ರತೀಕಾರ ಏನೆಂದು ನೀವು ಶೀಘ್ರದಲ್ಲೇ ನೋಡ್ತೀರ” ಎಂದು ಸ್ಪಷ್ಟ ಸಂದೇಶ ರವಾನಿಸಿರುವ ಟ್ರಂಪ್, ಇರಾನ್ ಆಡಳಿತದ ವಿರುದ್ಧ ನೇರ ಮಾತುಗಳನ್ನೇ ಬಳಸಿದ್ದಾರೆ.
“ಭಯೋತ್ಪಾದಕ ರಾಷ್ಟ್ರವನ್ನು ಸುಮ್ಮನೆ ಬಿಡೋದಿಲ್ಲ. ಇರಾನ್ ಆಡಳಿತ ಕೊನೆಗೊಳಿಸುವುದು ನಮ್ಮ ಗುರಿ” ಎಂದು ಟ್ರಂಪ್ ಘೋಷಿಸಿದ್ದಾರೆ. ಇನ್ನೂ 4-5 ವಾರಗಳ ಕಾಲ ಕಾರ್ಯಾಚರಣೆ ಮುಂದುವರಿಯಬಹುದು ಎಂದು ಹೇಳಿರುವ ಅವರು , ಅಗತ್ಯವಿದ್ದರೆ ಇನ್ನೂ ಹೆಚ್ಚು ಕಾಲ ದಾಳಿ ನಡೆಸಲು ಅಮೆರಿಕ ಸಿದ್ಧವಿದೆ ಎಂದು ಎಚ್ಚರಿಸಿದ್ದಾರೆ.
“ಇರಾನ್ ವಿರುದ್ಧ ಯುದ್ಧ ನಮಗೆ ಬೋರ್ ಆಗೋದಿಲ್ಲ. ನಾವು ಇನ್ನೂ ಪೂರ್ಣ ಪ್ರಮಾಣದ ದಾಳಿ ಆರಂಭಿಸಿಲ್ಲ. ದೊಡ್ಡ ಅಲೆ ಇನ್ನೂ ಎದ್ದಿಲ್ಲ, ಅದು ಶೀಘ್ರದಲ್ಲೇ ಬರಲಿದೆ” ಎಂದು ಹೇಳುವ ಮೂಲಕ, ಭಾರೀ ಸೈನಿಕ ಕ್ರಮದ ಸೂಚನೆ ನೀಡಿದ್ದಾರೆ. ಅಮೆರಿಕ ವಿಶ್ವದ ಶ್ರೇಷ್ಠ ಸೈನ್ಯವನ್ನು ಹೊಂದಿದೆ . ಟ್ರಂಪ್, ಹಲವಾರು ರಾಷ್ಟ್ರಗಳು ಅಮೆರಿಕದೊಂದಿಗೆ ಕೈಜೋಡಿಸಲು ಸಿದ್ಧವಾಗಿವೆ ಎಂದೂ ತಿಳಿಸಿದ್ದಾರೆ.
ಈ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ತೀವ್ರ ಸಂಘರ್ಷದ ಸಾಧ್ಯತೆ ಬಗ್ಗೆ ಚರ್ಚೆ ಜೋರಾಗಿದೆ. ಇರಾನ್ ಈಗಾಗಲೇ ಪ್ರತೀಕಾರದ ಮಾತು ಹೇಳಿರುವ ಹಿನ್ನೆಲೆಯಲ್ಲಿ, ಅಮೆರಿಕದ ಈ ಎಚ್ಚರಿಕೆ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಒಟ್ಟಾರೆ, ಅಮೆರಿಕ-ಇರಾನ್ ನಡುವಿನ ಮಾತಿನ ಯುದ್ಧ ಸೈನಿಕ ಸಂಘರ್ಷದ ಹಾದಿ ಹಿಡಿಯುವ ಸೂಚನೆ ನೀಡಿದ್ದು, ಮುಂದಿನ ಕೆಲ ವಾರಗಳು ಜಾಗತಿಕ ರಾಜಕೀಯದಲ್ಲಿ ನಿರ್ಣಾಯಕವಾಗಲಿವೆ.
