Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ಬೆಂಗಳೂರು ಸೆಷನ್ಸ್ ಕೋರ್ಟ್ನಲ್ಲಿ ನಟ Darshan Thoogudeepa ಸಂಬಂಧಿಸಿದ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ‘ಕಾಟೇರ’ ನಟ ದರ್ಶನ್ ಪರ ವಕೀಲರು ಪ್ರಕರಣವನ್ನು ಡೇ-ಟು-ಡೇ ಆಧಾರದಲ್ಲಿ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಗೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) Prasanna Kumar ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ .
ದರ್ಶನ್ ಪರ ವಕೀಲರು , ಪ್ರಕರಣದ ಶೀಘ್ರ ತೀರ್ಮಾನಕ್ಕಾಗಿ ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ಆದರೆ ಎಸ್ಪಿಪಿ ಪ್ರಸನ್ನ ಕುಮಾರ್, ಈಗಾಗಲೇ ಆದ್ಯತೆ ಆಧಾರದ ಮೇಲೆ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಸ್ವರೂಪ, ಸಾಕ್ಷ್ಯಗಳ ಪರಿಶೀಲನೆ ಹಾಗೂ ಸಾಕ್ಷಿದಾರರ ಹಾಜರಾತಿ ವಿಚಾರಗಳನ್ನು ಪರಿಗಣಿಸಬೇಕಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ .
ಇದೇ ವೇಳೆ ದರ್ಶನ್ ಪರ ವಕೀಲರು ಮತ್ತೊಂದು ಅರ್ಜಿಯನ್ನೂ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದಾರೆ. ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ನಿಯಮಾವಳಿಯ ಅನ್ವಯ , ಜೈಲಿನೊಳಗೆ ಕುಟುಂಬ ಸದಸ್ಯರು ಹಾಗೂ ವಕೀಲರು ನಿಯಮಿತವಾಗಿ ಭೇಟಿ ಮಾಡುವಂತೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಕಾರಣ, ಕುಟುಂಬದವರ ಭೇಟಿಗೆ ನಿರ್ದಿಷ್ಟ ವ್ಯವಸ್ಥೆ ಇರಬೇಕು ಎಂಬುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಸಿಕ್ಯೂಷನ್ ಆಕ್ಷೇಪಣೆ ಹಾಗೂ ರಕ್ಷಣಾ ಪರದ ಮನವಿಗಳ ಕುರಿತು ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ . ಡೇ-ಟು-ಡೇ ವಿಚಾರಣೆಗೆ ಅನುಮತಿ ಸಿಗುತ್ತದೆಯೇ ? ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡಲಾಗುತ್ತದೆಯೇ ? ಎಂಬುದರ ಬಗ್ಗೆ ನ್ಯಾಯಾಲಯದ ತೀರ್ಪು ನಿರೀಕ್ಷೆಯಲ್ಲಿದೆ.
