Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಒಳಗದ್ದಲ ಸದ್ದು ಮಾಡುತ್ತಿದೆ. “ದಲಿತ ಸಿಎಂ” ಚರ್ಚೆ ಜೋರಾಗುತ್ತಿದ್ದಂತೆಯೇ, ಸಿಎಂ – ಡಿಸಿಎಂ ನಡುವಿನ ಸಂಬಂಧಗಳ ಬಗ್ಗೆ ಪ್ರಶ್ನೆಗಳು ತಲೆದೋರಿವೆ .
ಸಚಿವರು, ಶಾಸಕರ ಹೇಳಿಕೆಗಳ ಮೇಲೆ ನಿಯಂತ್ರಣ ಯಾರು ವಹಿಸಬೇಕು ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ . ಕೆಪಿಸಿಸಿ ಅಧ್ಯಕ್ಷರ ವ್ಯಾಪ್ತಿಗೆ ಇದು ಬರುತ್ತದೆಯೇ ? ಅಥವಾ ಅದು ಸಿಎಂ ಕೆಲಸವೇ ? ಎಂಬ ಪ್ರಶ್ನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದು, “ಸಚಿವರು, ಶಾಸಕರ ನಿಯಂತ್ರಣ ಸಿಎಂ ಕೆಲಸ . ಹೈಕಮಾಂಡ್ಗೆ ರಿಪೋರ್ಟ್ ಕೊಡುವುದು ನನ್ನ ಜವಾಬ್ದಾರಿ” ಎಂದು ಹೇಳಿದ್ದಾರೆ .
ಇದರಿಂದಲೇ ರಾಜಕೀಯ ವಲಯದಲ್ಲಿ ಹಲವು ಅರ್ಥಗಳ ವಿಶ್ಲೇಷಣೆ ನಡೆಯುತ್ತಿದೆ . “ದಲಿತ ಸಿಎಂ” ವಿಚಾರದಲ್ಲಿ ಹೆಚ್ಚುತ್ತಿರುವ ಚರ್ಚೆ ಸಿಎಂ ಸಿದ್ದರಾಮಯ್ಯ ಕ್ಯಾಂಪ್ನಿಂದಲೇ ಹೊರಬರುತ್ತಿದೆಯೇ ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ . ನಿತ್ಯವೂ ಕೆಲ ನಾಯಕರು “ದಲಿತ ಸಿಎಂ” ಮಂತ್ರ ಜಪಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಡಿಸಿಎಂ ಡಿಕೆ ಅವರು ಈ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಾರಾ ? ನೇರವಾಗಿ ಎಚ್ಚರಿಕೆ ನೀಡಲು ಸಾಧ್ಯವಾಗದೆ , ಪರೋಕ್ಷ ಸಂದೇಶ ನೀಡುತ್ತಿದ್ದಾರಾ ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. “ಅದು ಸಿಎಂ ಕೆಲಸ” ಎಂಬ ಹೇಳಿಕೆಯಲ್ಲಿ ಅಸಮಾಧಾನದ ಸುಳಿವು ಕಾಣಿಸುತ್ತಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ಕನಕಪುರ ಬಂಡೆ ಎಂದೇ ಖ್ಯಾತರಾದ ಡಿಕೆ, ಮತ್ತೆ ಅಡ್ಡಗಾಲು ರಾಜಕೀಯದ ಭಯದಲ್ಲಿದೆಯೇ ? “ದಲಿತ ಸಿಎಂ” ದಾಳಿಗೆ ಸಿದ್ದು ಕಾರಣ ಎಂದು ಫಿಕ್ಸ್ ಮಾಡಿಕೊಂಡಿದೆಯೇ ಡಿಕೆ ಶಿಬಿರ ? ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ, ಸಿಎಂ–ಡಿಸಿಎಂ ನಡುವಿನ ಸಂಬಂಧ ಮತ್ತಷ್ಟು ಹಳಸಿದೆಯೇ ? ಅಥವಾ ಇದು ಕೇವಲ ರಾಜಕೀಯ ತಂತ್ರದ ಭಾಗವೇ ? ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಈಗಾಗಲೇ ಈ ಬೆಳವಣಿಗೆಗಳು ಕಾಂಗ್ರೆಸ್ ಒಳರಾಜಕೀಯಕ್ಕೆ ಹೊಸ ತಿರುವು ನೀಡಿರುವುದು ಸ್ಪಷ್ಟವಾಗಿದೆ …
